ಟೋಕಿಯೊ : ಅತ್ಯಂತ ಕಡಿಮೆ ಸಮಯದಲ್ಲಿ ಕ್ವಾಡ್ ಪ್ರಪಂಚದಲ್ಲಿ ತನ್ನ ಸ್ಥಾನವನ್ನು ನಿರೂಪಿಸಿಕೊಂಡಿದೆ. ಇಂದು ವಿಸ್ತಾರವಾದ ವ್ಯಾಪ್ತಿ ಹೊಂದಿರುವ ಸಂಘಟನೆಯು ಪರಿಣಾಮಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂದಿನಿಂದ ಆರಂಭವಾದ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಕ್ವಾಡ್ ನ ಪ್ರಯತ್ನಗಳು ಸ್ವತಂತ್ರ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸುತ್ತಿವೆ. ಇದು ಪರಸ್ಪರ ನಂಬಿಕೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಹೊಸ ಭರವಸೆ ನೀಡುತ್ತಿದೆ. ನಮ್ಮ ಪರಸ್ಪರ ನಂಬಿಕೆ ಮತ್ತು ನಮ್ಮ ನಿರ್ಣಯವು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ, ಉತ್ಸಾಹ ತುಂಬುತ್ತದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವುದು ನಮ್ಮೆಲ್ಲರ ಗುರಿ ಎಂದರು.
ಅಂತೆಯೇ ಕೋವಿಡ್-19 ರ ಕಠಿಣ ಪರಿಸ್ಥಿತಿಯ ಹೊರತಾಗಿಯೂ, ಸದಸ್ಯ ರಾಷ್ಟ್ರಗಳು ಲಸಿಕೆ ವಿತರಣೆ, ಹವಾಮಾನ ಕ್ರಮ ನಿಯಂತ್ರಣ, ಪೂರೈಕೆ ಬದಲಾವಣೆಯ ಸ್ಥಿತಿಸ್ಥಾಪಕತ್ವ, ವಿಪತ್ತು ನಿರ್ವಹಣೆ ಮತ್ತು ಆರ್ಥಿಕ ಸಹಕಾರದಂತಹ ಹಲವಾರು ಕ್ಷೇತ್ರಗಳಲ್ಲಿ ಪರಸ್ಪರ ಸಮನ್ವಯವನ್ನು ಹೆಚ್ಚಿಸಿವೆ. ಇದು ಇಂಡೋ-ಪೆಸಿಫಿಕ್ನಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸಿದೆ ಎಂದರು.
ಹೊಸದಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಅವರನ್ನು ಅಭಿನಂದಿಸಿದ ಭಾರತದ ಪ್ರಧಾನಿ, 24 ಗಂಟೆಗಳೊಳಗೆ ಕ್ವಾಡ್ ಶೃಂಗದಲ್ಲಿ ಭಾಗಿಯಾಗಲು ನೀವು ಇಲ್ಲಿಗೆ ಬಂದಿರುವುದು ನೀವು ಎಷ್ಟು ಬದ್ಧತೆ ಹೊಂದಿದ್ದೀರಿ ಎಂಬುದನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.










