ಗೀ ರೈಸ್, ಚಿಕನ್ ತಿಂದು 137 ನರ್ಸಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥ – ಆಸ್ಪತ್ರೆಗೆ ದಾಖಲು…

43
firstsuddi

ಮಂಗಳೂರು : ಹಾಸ್ಟೆಲ್ ನಲ್ಲಿ ನೀಡಿದ ಗೀ ರೈಸ್, ಚಿಕನ್ ತಿಂದು 137 ವಿದ್ಯಾರ್ಥಿನಿಯರು ಫುಡ್ ಪಾಯಿಸನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಶಕ್ತಿ ನಗರದಲ್ಲಿರುವ ಪ್ರತಿಷ್ಠಿತ ಸಿಟಿ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ರಾತ್ರಿ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತಡ ರಾತ್ರಿ ವಿದ್ಯಾರ್ಥಿನಿಯರನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಮತ್ತೊಂದೆಡೆ ತಮ್ಮ ಮಕ್ಕಳು ಅಸ್ವಸ್ಥಗೊಂಡ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯರ ಪೋಷಕರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿರುವ ಪೋಷಕರು ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಆರೋಪ ಹೇರಿದ್ದು ಆಕ್ರೋಶ ಹೊರ ಹಾಕಿದ್ದಾರೆ.

ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ರಾತ್ರಿ 9 ಗಂಟೆ ಸುಮಾರಿಗೆ ನಗರದ ಆಸ್ಪತ್ರೆಯ ಮುಂದೆ ಸುಮಾರು 400-500 ಜನರು ಜಮಾಯಿಸಿದ್ದರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಉಳಿದವರು ಅವರ ಕುಟುಂಬ ಸದಸ್ಯರಿದ್ದರು. ಬೆಳಗಿನ ಜಾವ 2 ಗಂಟೆಯಿಂದ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಫುಡ್ ಪಾಯಿಸನ್ ದೂರುಗಳನ್ನು ದಾಖಲಿಸಿದ್ದಾರೆ. 137 ವಿದ್ಯಾರ್ಥಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದಷ್ಟು ಬೇಗ ಈ ಘಟನೆಗೆ ಸೂಕ್ತ ಕಾರಣವನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದರು.

ಫುಡ್ ಪಾಯಿಸನ್ ಆದ ಕಾರಣ ಅವರನ್ನು ದಾಖಲು ಮಾಡಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಹಾಸ್ಟೆಲ್ ಗೆ ಭೇಟಿ ನೀಡಿ ವಾರ್ಡನ್ ಜತೆ ಸಂವಾದ ನಡೆಸಿ ಎಲ್ಲವನ್ನೂ ತಿಳಿದುಕೊಳ್ಳುತ್ತೇವೆ. ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.