ಚಾಕ್ಲೇಟ್ ಎಂದು ಪ್ಯಾಂಟ್ ಬಟನ್ ನುಂಗಿದ ಕಂದಮ್ಮ- ಪ್ರಾಣ ಉಳಿಸಿದ ವೈದ್ಯರು…

89
firstsuddi

ಕಾರವಾರ: ಅಕ್ಕ ಚಾಕ್ಲೇಟ್ ಎಂದು ಕೊಟ್ಟ ಪ್ಯಾಂಟಿನ ಬಟನ್ ಅನ್ನು 2 ತಿಂಗಳ ಮಗು ನುಂಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ಬಳಿ ನಡೆದಿದೆ.

ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಪೇಟ್ ಪಾಲಿಷ್ ಕಾರ್ಮಿಕ ಕಮಲ ಕಿಶೋರ ಅವರ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಹಸುಳೆ. 2 ವರ್ಷದ ನರ್ಮತಾ ಆಟವಾಡುತ್ತಾ ಚಾಕ್ಲೇಟ್ ಎಂದು ಪ್ಯಾಂಟ್ ಬಟನ್ ಅನ್ನು ಅಮೃತಾಳಿಗೆ ನೀಡಿದ್ದಾಳೆ. ಏನೂ ತಿಳಿಯದ ಹಸುಳೆ ಅಕ್ಕ ಕೊಟ್ಟ ಜೀನ್ಸ್ ಪ್ಯಾಂಟಿನ ಬಟನ್ ಅನ್ನು ನುಂಗಿ ಉಸಿರಾಡಲು ಕಷ್ಟವಾಗಿ ಒದ್ದಾಡಲು ಪ್ರಾರಂಭಿಸಿದೆ.

ಇತ್ತ ಉಸಿರಾಡಲು ಒದ್ದಾಡುತ್ತಿದ್ದ ಮಗುವನ್ನು ಪೋಷಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರ ಯಶಸ್ವಿ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಭಟ್ಕಳ ಸರಕಾರಿ ಆಸ್ಪತ್ರೆಯ ಇಎನ್‍ಟಿ ತಜ್ಞ ಡಾ. ಸತೀಶ ನೇತೃತ್ವದ ವೈದ್ಯರ ತಂಡ ಕೊಳವೆಯ ಮೂಲಕ ಬಟನ್ ಅನ್ನು ಹೊರ ತೆಗೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹಸುಳೆಯ ಪ್ರಾಣ ಉಳಿಸಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ಕಾರ್ಯ ದಕ್ಷತೆಯ ಬಗ್ಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.