ಚಾರ್ಮಾಡಿಯಲ್ಲಿ ಸಿಗದ ಶರತ್ ಮೃತದೇಹ – ಬರಿಗೈಯಲ್ಲಿ ಹಿಂದಿರುಗಿದ ಬೆಂಗಳೂರು ಪೊಲೀಸರು.

70
firstsuddi

ಮೂಡಿಗೆರೆ : ಬೆಂಗಳೂರಿನ ಕೋಣನಕುಂಟೆಯ ಯುವಕ ಶರತ್ ಮೃತದೇಹಕ್ಕಾಗಿ ಬೆಂಗಳೂರಿನ ಪೊಲೀಸರು ಕಳೆದ ಮೂರು ದಿನಗಳಿಂದ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಹುಡುಕಾಟ ನಡೆಸಿದ್ದಾರೆ. 10ಕ್ಕೂ ಹೆಚ್ಚು ಪೊಲೀಸರ ಜೊತೆ 20ಕ್ಕೂ ಹೆಚ್ಚು ಸ್ಥಳೀಯ ಯುವಕರು 3 ದಿನಗಳಿಂದ ನಿರಂತರವಾಗಿ ಹುಡುಕಿದರೂ ಶವ ಸಿಗದ ಹಿನ್ನೆಲೆ ಪೊಲೀಸರು ಬರಿಗೈಯಲ್ಲಿ ವಾಪಾಸಾಗಿದ್ದಾರೆ.

ಶರತ್ ಸಬ್ಸಿಡಿ ದರದಲ್ಲಿ ಕಾರು ಕೊಡಿಸುತ್ತೇನೆ ಎಂದು ನಂಬಿಸಿ ಕೆಲವರಿಂದ ಹಣ ಪಡೆದಿದ್ದ. ಆದರೆ ಕಾರು ಕೊಡಿಸದ ಹಿನ್ನೆಲೆ ಹಣ ಕೊಟ್ಟವರು ಶರತ್ ನನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೈದಿದ್ದರು. ಕೊಲೆಯ ಬಳಿಕ ಮೃತ ದೇಹವನ್ನು ತಾಲೂಕಿನ ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. 9 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಶರತ್ ಮೃತ ದೇಹವನ್ನು ಎಲ್ಲಿ ಎಸೆದಿದ್ದರು ಎಂದು ತಿಳಿದುಕೊಳ್ಳಲು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ಒಮ್ಮೆ ಓರ್ವ ಬಲ ಭಾಗ ಅಂದ್ರೆ, ಮತ್ತೋರ್ವ ಎಡಭಾಗ ಅಂತಿದ್ದಾನೆ. ಇದು ಪೊಲೀಸರನ್ನ ಅತಂತ್ರಕ್ಕೀಡುಮಾಡಿದೆ. ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಮೃತದೇಹಕ್ಕಾಗಿ ಬೆಟ್ಟ-ಗುಡ್ಡ ಹತ್ತಿ ಇಳಿದು ಹುಡುಕಾಡಿದ್ದಾರೆ. ಆದರೆ ಮೃತದೇಹ ಪತ್ತೆಯಾಗಿಲ್ಲ. 9 ತಿಂಗಳು ಕಳೆದಿರುವುದರಿಂದ ಪೊಲೀಸರಿಗೆ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಬೇಕಾದ ಹಿನ್ನೆಲೆ ಮೃತ ದೇಹವನ್ನು ಶೋಧಿಸುವ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಬೆಂಗಳೂರಿಗೆ ಬರಿಗೈಲಿ ಹಿಂದಿರುಗಿದ್ದಾರೆ.

ಚಾರ್ಮಾಡಿ ಘಾಟ್ ಸಾವಿರಾರು ಅಡಿ ಪ್ರಪಾತದ ಪ್ರದೇಶ. ದಟ್ಟ ಕಾನನ. ಅಸಂಖ್ಯಾತ ಪ್ರಾಣಿಗಳ ಆವಸ ಸ್ಥಾನ. ಕಾಡುಹಂದಿ ಹಾಗೂ ಸೀಳು ನಾಯಿಗಳು ಯಥೇಚ್ಛವಾಗಿವೆ. ಪ್ರಾಣಿಗಳು ತಿಂದಿರಬಹುದು. ಅಲ್ಲದೇ ಯಥೇಚ್ಛವಾಗಿ ಮಳೆ ಬೀಳುವ ಪ್ರದೇಶ. ಇಲ್ಲಿ ಬೀಳುವ ಮಳೆ ನೀರು ಕಣಿವೆಯಲ್ಲಿ ಹರಿದು ನೇತ್ರಾವತಿ ನದಿ ಸೇರುತ್ತೆ. 2022ರಲ್ಲಿ ಕಾಫಿನಾಡಲ್ಲಿ ಯಥೇಚ್ಛವಾಗಿ ಮಳೆ ಸುರಿದಿದೆ. ಮೃತದೇಹದ ಅವಶೇಷಗಳಿದ್ದರೂ ಕೂಡ ಮಳೆ ನೀರಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ.