ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಪ್ರಯಾಣಿಕರಿಗೆ ಪ್ರಾಣಭಯ ಸೃಷ್ಟಿಸಿದ ಒಂಟಿ ಸಲಗ…

726
firstsuddi

ಮೂಡಿಗೆರೆ : ಕಳೆದ ಮೂರು ನಾಲ್ಕು ದಿನಗಳಿಂದ ಒಂಟಿ ಸಲಗವೊಂದು ಚಾರ್ಮಾಡಿ ಘಾಟಿಯಲ್ಲಿ ಆಗಾಗ ಕಾಣಿಸಿಕೊಂಡು ವಾಹನ ಸವಾರರಿಗೆ ದುಸ್ವಪ್ನವಾಗಿ ಕಾಡಿದೆ. ಇದರಿಂದ ವಾಹನ ಸವಾರರು ಭಯದಿಂದಲೇ ವಾಹನ ಚಲಾಯಿಸುವಂತಾಗಿದ್ದು, ಸಮೀಪದ ಗುತ್ತಿಹಳ್ಳಿ, ಮೂಲರಹಳ್ಳಿ, ಕೊಟ್ಟಿಗೆಹಾರ ಗ್ರಾಮದ ಸುತ್ತಮುತ್ತ ಸಂಚರಿಸಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಈಗ ಚಾರ್ಮಾಡಿ ಘಾಟಿಯಲ್ಲೂ ಪ್ರಯಾಣಿಕರಿಗೆ ಪ್ರಾಣ ಭಯ ಸೃಷ್ಟಿಸಿರುವುದರಿಂದ ಲಘು ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಎದುರಿಸಬೇಕಾಗಿದೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ವಾಹನ ಚಾಲಕ ರಾಜೇಶ್ ಅವರು ಒಂಟಿ ಸಲಗ ಇರುವಿಕೆಯ ಬಗ್ಗೆ ಮಾಹಿತಿ ನೀಡಿದ್ದು, ಅವರು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬರುತ್ತಿರುವಾಗ ಘಾಟಿಯ 9ನೇ ತಿರುವು ಹಾಗೂ ಬಾಂಜಾರಿಗೆ ಸಾಗುವ ತಿರುವು ರಸ್ತೆಯಲ್ಲಿ ಒಂಟಿ ಸಲಗವು ಕಾಣಿಸಿಕೊಂಡಿದ್ದು, ಕಾಡಾನೆ ಸ್ವಲ್ಪ ದೂರವಿದ್ದರಿಂದ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಬಂದೆ. ಚಾರ್ಮಾಡಿಯಲ್ಲಿ ಯಾವಾಗ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ ಎಂದರು.
ಈ ಬಗ್ಗೆ ಚಾರ್ಮಾಡಿಯ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಅರಣ್ಯ ಸಿಬ್ಬಂದಿ ಸುರೇಶ್ ಅವರು ಪ್ರತಿಕೃಯಿಸಿ ಕಾಡಾನೆ ಬಗ್ಗೆ ನನಗೆ ದೂರು ಬಂದಿದೆ. ಆದರೆ ಒಂಟಿ ಸಲಗವು ದಕ್ಷಿಣ ಕನ್ನಡ ವ್ಯಾಪ್ತಿಯ ಅರಣ್ಯದಲ್ಲಿ ಸಂಚರಿಸುತ್ತಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಅದಿಕಾರಿಗಳ ಗಮನಕ್ಕೆ ತರಲಾಗುವುದು ಎಂದಿದ್ದಾರೆ. ಸಂಬಂಧಪಟ್ಟ ಅರಣ್ಯ ಅದಿಕಾರಿಗಳು ಈ ಬಗ್ಗೆ ಗಮನ ಹರಿಸಿ ಒಂಟಿ ಸಲಗನನ್ನು ಓಡಿಸಿ ಅಥವಾ ಸ್ಥಳಾಂತರ ಮಾಡಿ ಜನರ ಪ್ರಾಣ ಉಳಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.