ಚಿಕ್ಕಮಗಳೂರಿನಲ್ಲಿ ಸಂಭ್ರಮದ 69ನೇ ಗಣರಾಜ್ಯೋತ್ಸವ

644

ಚಿಕ್ಕಮಗಳೂರು : ೧೯೫೦ ಜನವರಿ ೨೬ ಭಾರತದ ಇತಿಹಾಸದಲ್ಲಿ ಯಾರು ಮರೆಯಲಾಗದ ದಿನ. ಆ ದಿವಸ ಭಾರತಕ್ಕೆ ತನ್ನದೇ ಆದ ಒಂದು ಸಂವಿಧಾನವನ್ನು ಜಾರಿಗೆ ತಂದ ದಿನ. ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ರವರು ತಮ್ಮ ಅನುಭವ ಅಧ್ಯಯನ, ಮುಂದಿನ ಯೋಚನೆಯಿಂದ ಸಮಾಜದ ಎಲ್ಲಾ ನೊಂದ ಜನ ಸಮುದಾಯದ ಅಭಿವೃದ್ಧಿಗೆ ಹಾಗೂ ಎಲ್ಲರೂ ಮುಖ್ಯ ವಾಹಿನಿಗೆ ಬಂದು ಒಂದಾಗಿ ಬದುಕುವ ಅವಕಾಶಗಳನ್ನು ನೀಡಲು ಸಂವಿಧಾನವನ್ನು ರಚಿಸಿದ್ದಾರೆ. ಆ ಮೂಲಕ ಮಾನವತೆಯ ಉಳಿವು ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ.

ಭಾರತವು ನೂರ ಇಪ್ಪತ್ತು ಕೋಟಿಗೂ ಮೀರಿದ ಜನಸಂಖ್ಯೆಯ ೨೯ ರಾಜ್ಯಗಳು, ೭ ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ ವ್ಯವಸ್ಥೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ ಮತ್ತು ಜೀವನ ವಿಧಾನ ಹೊಂದಿದೆ. ಅದಕ್ಕಾಗಿ ಭಾರತೀಯರೆಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ಸಂದರ್ಭದಲ್ಲಿ ಗಣರಾಜ್ಯೋತ್ಸವದ ನಮ್ಮ ಆಶಯಗಳು ಫಲ ನೀಡಿವೆಯೇ ಎಂದು ನಾವೆಲ್ಲರೂ ಒಟ್ಟಾಗಿ ಯೋಚಿಸಿ ನೋಡುವುದು ಅಗತ್ಯ.

ಆದರೆ ನಾವು ಒಗ್ಗಟಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೂ ಇಂದಿಗೂ ಸಹ ನಮ್ಮ ದೇಶದ ರಾಜ್ಯ ರಾಜ್ಯಗಳ ನಡುವೆ ಅನೇಕ ಕಲಹಗಳು ಹಾಗೇ ಉಳಿದಿವೆ. ಅದು ಗಡಿ ವಿವಾದ ಇರಬಹುದು, ಜಲವಿವಾದ ಇರಬಹುದು ಅಥವಾ ಅಭಿವೃದ್ಧಿಯ ಅಸಮಧಾನ ಇರಬಹುದು. ಈ ಎಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ. ನಾವು ಭಾರತೀಯರು ಎನ್ನುವ ಬಗ್ಗೆ ನನಗೆ ಹೆಚ್ಚು ಸಂತೋಷ ಇದೆ. ದೇಶದಲ್ಲಿ ಇರುವ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ನೀಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಇಂದು ಪ್ರಮಾಣ ಮಾಡಬೇಕಾಗಿದೆ.

ನಾವೆಲ್ಲರೂ ಜಾತಿ, ಭಾಷೆ, ಪಂಗಡ, ಸಂಕುಚಿತ ಭಾವನೆಯಿಂದ ಹೊರಬಂದು, ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಲು ಒಟ್ಟಾಗಿ ಸೇರಿ ಶ್ರಮಿಸೋಣ ಎಂಬ ಮಾತನ್ನು ಈ ಸಂದರ್ಭದಲ್ಲಿ ತಮಗೆಲ್ಲರಿಗೂ ತಿಳಿಸ ಬಯಸುತ್ತೇನೆ. ನಮ್ಮ ಸರ್ಕಾರ ನಾಲ್ಕು ವರ್ಷ ಎಂಟು ತಿಂಗಳುಗಳನ್ನು ಪೂರೈಸಿ ಪೂರ್ಣಾವಧಿಯತ್ತ ತೆಗೆದುಕೊಂಡು ಹೋಗುತ್ತಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆಯುವ ಮೂಲಕ ತನ್ನ ವಿಶ್ವಾಸವನ್ನು ಉಳಿಸಿಕೊಂಡು ನಡೆಯುತ್ತಿದೆ. ಈ ಆಡಳಿತ ನನಗೆ ತೃಪ್ತಿ ಹಾಗೂ ಸಂತೋಷ ತಂದಿದೆ.

ರಾಜ್ಯದ ಐದು ಕೋಟಿಗೂ ಹೆಚ್ಚು ಜನರಿಗೆ ನಮ್ಮ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಿದೆ. ಎಲ್ಲಾ ವರ್ಗದ, ಎಲ್ಲಾ ಸಮುದಾಯದ, ಎಲ್ಲಾ ವಲಯದಲ್ಲೂ ಫಲಾನುಭವಿಗಳು ಇದ್ದಾರೆ ಎಂದು ಸಂತೋಷದಿಂದ ಹೇಳಬಯಸುತ್ತೇನೆ. ನಮ್ಮದು ಜನಪರ ಮತ್ತು ಜನಮುಖಿ ಸರ್ಕಾರ ಅಭಿವೃದ್ದಿಯೇ ನಮ್ಮ ಮಂತ್ರ. ಜನಪರ ನಿಲುವುಗಳಿಗೆ ಹೆಚ್ಚಿನ ಮನ್ನಣೆ ನೀಡುವ ಸರ್ಕಾರ ನಮ್ಮದು.

ನಮ್ಮ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ಋಣಮುಕ್ತ, ವಿದ್ಯಾಸಿರಿ, ಕ್ಷೀರಧಾರೆ, ನಿರ್ಮಲಭಾಗ್ಯ, ವಸತಿಭಾಗ್ಯ, ಪಶುಭಾಗ್ಯ ಮಾತೃಪೂರ್ಣ, ಇಂದಿರಾ ಕ್ಯಾಂಟೀನ್ ಇನ್ನೂ ಮುಂತಾದ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಎಲ್ಲಾ ಜನರ ನೆಮ್ಮದಿ ಬದುಕಿಗೆ ಸಹಕಾರಿ ಆಗಿವೆ.

ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳಲ್ಲು ನಿರ್ಮಿಸಲು ಉದ್ದೇಶಿಸಿದೆ. ಅದರಂತೆ ಹಾಲಿ ಚಿಕ್ಕಮಗಳೂರಿನಲ್ಲಿ ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ಎನ್.ಆರ್. ಪುರ, ಶೃಂಗೇರಿಗಳಲ್ಲಿ ತಲಾ ಒಂದರಂತೆ ಒಟ್ಟು-೮ ಇಂದಿರಾ ಕ್ಯಾಂಟೀನ್ಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಈ ಪ್ರದೇಶದ ಬಡಜನರಿಗೆ ಕಡಿಮೆದರದಲ್ಲಿ ಉತ್ತಮ ಗುಣಮಟ್ಟದ ತಿಂಡಿ ಹಾಗೂ ಊಟವನ್ನು ಸರಬರಾಜು ಮಾಡಿ ಬಡವರ್ಗದ ಜನರ ಹಸಿವು ತುಂಬಿಸಲು ನಮ್ಮ ಸರ್ಕಾರ ನಿರ್ಧರಿಸಿದೆ.

ನಮ್ಮ ಸರ್ಕಾರ ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆ, ಗ್ರಾಮೀಣಾಭಿವೃದ್ಧಿ ಹಾಗೂ ರೈತರು, ಮತ್ತು ಮಹಿಳಾ ಪರ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿದೆ. ನಾವು ಜನತೆಗೆ ನೀಡಿದ ೧೬೫ ಭರವಸೆಗಳಲ್ಲಿ ೧೬೦ ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದುಕೊಂಡಿದ್ದೇವೆ.
ನಮ್ಮ ಸರ್ಕಾರ ಬಂದ ಮೊದಲ ದಿವೇ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಯನ್ನು ಜಾರಿಗೆ ತರಲಾಯಿತು. ರಾಜ್ಯದ ಪ್ರತಿ ವ್ಯಕ್ತಿಗೆ ಉಚಿತವಾಗಿ ೭ ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ರಿಯಾಯಿತಿ ದರದಲ್ಲಿ ತೊಗರಿ ಬೇಳೆಯನ್ನು ನೀಡಲಾಗುತ್ತಿದೆ. ಇದು ೧ ಕೋಟಿ ೨೩ ಲಕ್ಷ ಬಡಕುಟುಂಬಗಳಿಗೆ ನೆರವಾಗಿದೆ.

ಕ್ಷೀರಭಾಗ್ಯ/ಕ್ಷೀರಧಾರೆ ಯೋಜನೆಯಡಿ ಪ್ರತಿ ಲೀಟರ್ಗೆ ರೂ. ೫ ರಂತೆ ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಯಿಂದ ೫೦ ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ ೭೦ ಲಕ್ಷ ಲೀಟರ್ಗೆ ಏರಿಕೆಯಾಗಿದೆ. ಇದರಿಂದ ೧ ಕೋಟಿ ೨ ಲಕ್ಷ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಕುಡಿಯಲು ಹಾಲು ನೀಡಲಾಗುತ್ತಿದೆ. ನಮ್ಮ ಸರ್ಕಾರ. ದೇಶದಲ್ಲೇ ಮೊದಲು ಜಾರಿಗೆ ತಂದ ರಾಜೀವ ಆರೋಗ್ಯ ಭಾಗ್ಯ ಯೋಜನೆಯಡಿ ೩.೫ ಕೋಟಿ ಮಧ್ಯಮ ವರ್ಗದ ಮಂದಿಗೆ ಆರೋಗ್ಯ ಖಾತ್ರಿ ನೀಡಲಾಗುತ್ತಿದೆ. ಗ್ರಾಮೀಣ ಭಾಗಕ್ಕೆ ಇದ್ದ ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ.

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ನಾವು ದೇಶಕ್ಕೆ ಮಾದರಿಯಾಗಿದ್ದೇವೆ. ೯೩೦೦ ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ೧.೫ ಕೋಟಿ ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ದೊರಕುತ್ತಿದೆ. ಕೃಷಿಭಾಗ್ಯ ಯೋಜನೆಯಡಿ ನಮ್ಮ ಸರ್ಕಾರದ ಅವಧಿಯಲ್ಲಿ ೭೯ ಲಕ್ಷಕ್ಕೂ ಹೆಚ್ಚು ರೈತರಿಗೆ ನೇರವಾಗಿ ಒಂದಲ್ಲ ಒಂದು ರೀತಿಯಲ್ಲಿ ಸಹಾಯವಾಗಿದೆ.

ಮಹಿಳೆಯರು ಮತ್ತು ಮಕ್ಕಳು ನಮ್ಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಅಂಗನವಾಡಿಯಿಂದ, ಕಾಲೇಜು ಓದುತ್ತಿರುವ ಎಲ್ಲಾ ಮಕ್ಕಳಿಗೆ ನಮ್ಮ ಸರ್ಕಾರ ಅನೇಕ ನೆರವನ್ನು ನೀಡುತ್ತಿದೆ. ಇದೇ ಮೊದಲ ಬಾರಿಗೆ ಎಲ್ಲಾ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದೆ.

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಪುಸ್ತಕ, ಸಮವಸ್ತ್ರ, ಶೂ-ಕಾಲುಚೀಲ ನೀಡುತ್ತಿದ್ದೇವೆ. ಗರ್ಭಿಣಿ ಬಾಣಂತಿಯರಿಗೆ ’ಮಾತೃಪೂರ್ಣ’ ಯೋಜನೆಯಡಿ ಉಚಿತವಾಗಿ ಉತ್ತಮ ಆಹಾರವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿದ್ದೇವೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಇಡೀ ದೇಶದಲ್ಲೇ ಹೆಚ್ಚಿನ ಬಂಡವಾಳವನ್ನು ತಂದ ರಾಜ್ಯಗಳ ಪೈಕಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ.
ಜಗಜ್ಯೋತಿ ಬಸವೇಶ್ವರರ ಜನ್ಮದಿನವಾದ ೨೦೧೩ರ ಮೇ ೧೩ ರಂದು ಅಧಿಕಾರ ಸ್ವೀಕರಿಸಿದ ನಾವು ಅವರ ಆಶಯಗಳಿಗೆ ಅನುಗುಣವಾಗಿ ನುಡಿದಂತೆ ನಡೆಯುವ ಸಂಕಲ್ಪ ಮಾಡಿದ್ದೇವೆ. ಅವರ ಗೌರವಕ್ಕೆ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಪ್ರದರ್ಶಿಸಲು ಆದೇಶ ಹೊರಡಿಸಿದ್ದೇವೆ.

ನಮ್ಮ ಸರ್ಕಾರ ಘೋಷಣೆ ಮಾಡಿದ ಯೋಜನೆಗಳೆಲ್ಲವು ನಿರೀಕ್ಷಿಸಿದಂತೆ ಫಲ ನೀಡುತ್ತಿವೆ. ಜನರ ಆಸೆಯಂತೆ ಸ್ವಚ್ಚ ಮತ್ತು ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದ್ದೇವೆ. ನಮ್ಮ ಜನಪರ ಯೋಜನೆಗಳ ಮೂಲಕವೇ ಜನ-ಮನದಲ್ಲಿ ಇದ್ದೇವೆ. ಎಂದು ಸಂತೋಷದಿಂದ ಹೇಳುತ್ತೇನೆ.ಈ ರೀತಿ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಮ್ಮ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಏಕತೆಗಾಗಿ ನಾವೆಲ್ಲರೂ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಉತ್ತಮ ಸ್ಥಾನ ಪಡೆಯಲು ಶ್ರಮಿಸೋಣ ಎಂಬ ಆಶಯದೊಂದಿಗೆ ಎಲ್ಲರಿಗೂ ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ.