ಚಿಕ್ಕಮಗಳೂರು : ಆಜಾದ್ ಪಾರ್ಕ್ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿದ ಮಕ್ಕಳ ದಿನಾಚರಣೆ…

135
firstsuddi

ಚಿಕ್ಕಮಗಳೂರು : ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನಿನ್ನೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಂದಲೇ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿಸುವುದರ ಜೊತೆಗೆ ಅವರನ್ನು ಸತ್ಕರಿಸಿ ಸಿಹಿ ವಿತರಿಸಲಾಯಿತು. ದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಇದೇ ವೇಳೆ ಸೇವೆಯಿಂದ ನಿವೃತ್ತರಾದ ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅವರನ್ನು ಭಾರತ ಸೇವಾದಳ ಮತ್ತು ಶಾಲೆ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯೆ ಉಮಾ ಐ.ಬಿ.ಶಂಕರ್ ಮಾತನಾಡಿ ಗೀತಾ ಅವರು ಮುಖ್ಯ ಶಿಕ್ಷಕಿಯಾಗಿ ಸಲ್ಲಿಸಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ಗೀತಾ ಅವರ ನಿಸ್ವಾರ್ಥ ಸೇವೆಯಿಂದಾಗಿ ಶಾಲೆ ಅಭಿವೃದ್ದಿ ಕಂಡಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ನಿವೃತ್ತಿ ನಂತರವೂ ಸಹ ಶಾಲೆಗೆ ಮಾರ್ಗದರ್ಶನ ಮತ್ತು ಸಹಕಾರ ನೀಡುವಂತೆ ಗೀತಾ ಅವರಿಗೆ ಮನವಿ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಆರ್.ಗೀತಾ ಶಿಕ್ಷಕರ ಸಂಪೂರ್ಣ ಸಹಕಾರದಿಂದಾಗಿ ತಾವು ಮುಖ್ಯ ಶಿಕ್ಷಕಿಯಾಗಿ ಯಶಸ್ವಿಯಾಗಲು ಸಾಧ್ಯವಾಯಿತು, ತವರು ಶಾಲೆಯಲ್ಲಿ ಸನ್ಮಾನಿಸಿರುವುದು ತಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆ ತಂದಿದೆ ಎಂದರು.
ಮುಂದೂ ಸಹ ಶಾಲೆಯ ನವೀಕರಣ ಮತ್ತು ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಶಿಕ್ಷಕರಾದ ಸಾವಿತ್ರಿ, ಜಯಂತಿ, ನಾಗವೇಣಿ ಉಪಸ್ಥಿತರಿದ್ದರು.