ಚಿಕ್ಕಮಗಳೂರು : ಆರ್ಥಿಕ ಗಣತಿ ಕಾರ್ಯವನ್ನು ಅರ್ಪಣಾ ಮನೋಭಾವದಿಂದ ಪರಿಣಾಮಕಾರಿಯಾಗಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಸಲಹೆ…

244
firstsuddi

ಚಿಕ್ಕಮಗಳೂರು : ಆರ್ಥಿಕ ಗಣತಿ ಕಾರ್ಯವನ್ನು ಅರ್ಪಣಾ ಮನೋಭಾವದಿಂದ ಪರಿಣಾಮಕಾರಿಯಾಗಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಸಾಮಾನ್ಯ ಸೇವಾ ಕೇಂದ್ರಗಳ ಮೇಲ್ವಿಚಾರಕರಿಗೆ ಸಲಹೆ ಮಾಡಿದರು.
7ನೇ ಆರ್ಥಿಕ ಗಣತಿ ಹಿನ್ನೆಲೆಯಲ್ಲಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ ಹಾಗೂ ಶಿವಮೊಗ್ಗಾದ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಛೇರಿ ನಗರದ ವಸಂತದತ್ತ ಸಭಾಂಗಣದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ಮೇಲ್ವಿಚಾರಕರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಎಲ್ಲಾ ಆರ್ಥಿಕ ಗಣತಿಯನ್ನು ಸರ್ಕಾರದ ತಳಮಟ್ಟದ ಅಧಿಕಾರಿಗಳಿಂದ ಮಾಡಿಸಲಾಗುತ್ತಿತ್ತು ಅದರಿಂದ ಅವರಿಗೆ ಕೆಲಸದ ಹೊರೆ ಜಾಸ್ತಿಯಾಗಿ ಪರಿಣಾಮಕಾರಿಯಾಗಿ ಗಣತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ ಈ ಹಿನ್ನೆಲೆಯಲ್ಲಿ ಈ ಬಾರಿ ಖಾಸಗೀ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ ಎಂದರು.
ಆರ್ಥಿಕ ಗಣತಿ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಾದರೆ ಆ ಕಾರ್ಯ ಮಾಡಬೇಕಾದ ನೀವುಗಳು ಶ್ರದ್ದೆ ಮತ್ತು ಆಸಕ್ತಿಯನ್ನು ವಹಿಸಬೇಕು ಕಾಟಾಚಾರಕ್ಕಾಗಿ ಕಾರ್ಯನಿರ್ವಹಿಸಬಾರದು ಯಾವುದೇ ಯೂನಿಟ್‍ಗಳನ್ನೂ ಬಿಡದೇ ಗಣತಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜನರನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಣುವ ಮೂಲಕ ಅವರಿಂದ ಆರ್ಥಿಕ ಮಾಹಿತಿಯನ್ನು ನಿಖರವಾಗಿ ಪಡೆದುಕೊಳ್ಳಬೇಕು ಎಂದ ಅವರು ದೇಶ ಆರ್ಥಿಕವಾಗಿ ಅಭಿವೃದ್ದಿಯಾಗುವುದಕ್ಕೆ ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸುವುದಕ್ಕೆ ಆರ್ಥಿಕ ಗಣತಿ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ವ್ಯವಸ್ಥಾಪಕ ಸಿ.ಎನ್.ಹೇಮಂತ್ ಕುಮಾರ್ ಮಾತನಾಡಿ ಆರ್ಥಿಕ ಗಣತಿ ಕಾರ್ಯ ಯಶಸ್ವಿಯಾಗಲು ಸಹಕರಿಸುವಂತೆ ಶಿಬಿರಾರ್ಥಿಗಳಿಗೆ ಮನವಿ ಮಾಡಿದರು.
ತರಬೇತುದಾರ ಜಯಪ್ರಕಾಶ್ ಜಿಲ್ಲಾ ನೋಡಲ್ ಅಧಿಕಾರಿ ಉಪೇಂದ್ರ ಉಪಸ್ಥಿತರಿದ್ದರು. ಡಿ.ಕೆ.ಸೋಮಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕರೀಗೌಡ ಸ್ವಾಗತಿಸಿದರು, ಸಹ ಸಾಂಖ್ಯಿಕ ಅಧಿಕಾರಿ ರಘು ವಂದಿಸಿದರು.