ಚಿಕ್ಕಮಗಳೂರು : ಇಂದಿನ ಪೀಳಿಗೆ ಸಂಸ್ಕಾರವಂತರಾಗುವ ನಿಟ್ಟಿನಲ್ಲಿ ಸಂಗೀತಾಭ್ಯಾಸಿಗಳಾಗಬೇಕು : ಜಿ.ಎಸ್.ನಟೇಶ್

257
firstsuddi

ಚಿಕ್ಕಮಗಳೂರು : ಇಂದಿನ ಪೀಳಿಗೆ ಸಂಸ್ಕಾರವಂತರಾಗುವ ನಿಟ್ಟಿನಲ್ಲಿ ಸಂಗೀತಾಭ್ಯಾಸಿಗಳಾಗಬೇಕು ಎಂದು ಶಿವಮೊಗ್ಗದ ಮಂಕುತಿಮ್ಮನ ಕಗ್ಗ ಖ್ಯಾತಿಯ ವಾಗ್ಮಿ ಜಿ.ಎಸ್.ನಟೇಶ್ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ಶ್ರೀ ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.
ಸಂಗೀತ ಆಧ್ಯಾತ್ಮದ ಮೆಟ್ಟಿಲು, ಅದು ಸಂಸ್ಕಾರವನ್ನು ಕಲಿಸುತ್ತದೆ ಸಂಗೀತದಿಂದ ಪಾರಮಾರ್ಥ ದೊರೆಯುತ್ತದೆ, ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು.
ಭಕ್ತರನ್ನು ಭಗವಂತನೆಡೆಗೆ ಭಗವಂತನನ್ನು ಭಕ್ತರೆಡೆಗೆ ಕರೆದೊಯ್ಯುವುದು ಸಂಗೀತ. ಅದು ಭಕ್ತಿ ಮಾರ್ಗವನ್ನು ತೋರುತ್ತದೆ, ಸಂಗೀತದಿಂದ ನಮ್ಮ ಒಳಗಣ್ಣು ತೆರೆಯುತ್ತದೆ, ಮನಸ್ಸು ಅರಳುತ್ತದೆ, ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರಾಧನಾ ಮಹೋತ್ಸವ ಸಮಿತಿಯ ಸಂಚಾಲಕ ಕೆ.ಎನ್.ಮಂಜುನಾಥ ಭಟ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆರಾಧನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಎಸ್.ಶಂಕರನಾರಾಯಣ ಭಟ್ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ನಿಟ್ಟಿನಲ್ಲಿ ಪೋಷಕರು ಅವರಿಗೆ ಸಂಗೀತವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಆರಾಧನೆ ಅಂಗವಾಗಿ ನಡೆಸಲಾದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು, ಸಂಗೀತ ಶಿಕ್ಷಕಿ ಕಲ್ಪಿತ ಎಸ್.ಕಶ್ಯಪ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಪುರಂದರದಾಸರ ಪಿಳ್ಳಾರಿ ಗೀತೆಗಳ ಗಾಯನ, ಸ್ಥಳೀಯ ಸಂಗೀತಗಾರರಿಂದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್, ಖಜಾಂಚಿ ಡಿ.ಹೆಚ್.ನಟರಾಜ್, ಆಡಳಿತಾಧಿಕಾರಿ ಎಸ್.ಶಾಂತಕುಮಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪಿ.ಎಸ್.ಸುಪ್ರಿಯ ಕಾರ್ಯಕ್ರಮವನ್ನು ನಿರೂಪಿಸಿದರು, ಆರಾಧನಾ ಮಹೋತ್ಸವ ಸಮಿತಿಯ ಸಂಚಾಲಕ ಡಾ|| ಹೆಚ್.ವಿಷ್ಣುವರ್ಧನ್ ಸ್ವಾಗತಿಸಿದರು, ಉಪನ್ಯಾಸಕಿ ಎಸ್.ಎಲ್.ಮಾನಸ ವಂದಿಸಿದರು.