ಚಿಕ್ಕಮಗಳೂರು : ಎನ್.ಆರ್. ಪುರ ತಾಲ್ಲೂಕಿನ ಸಿಂಸೆಯ ಬೋವಿ ಕಾಲೋನಿಗೆ ರಸ್ತೆ ಮತ್ತು ಚರಂಡಿ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

301
firstsuddi

ಚಿಕ್ಕಮಗಳೂರು : ನರಸಿಂಹರಾಜಪುರ ತಾಲ್ಲೂಕಿನ ಸಿಂಸೆಯ ಬೋವಿ ಕಾಲೋನಿಗೆ ರಸ್ತೆ ಮತ್ತು ಚರಂಡಿ ನಿರ್ಮಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಡಾ|| ಕೆ.ಕುಮಾರ್ ಅವರನ್ನು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಸಿಂಸೆಯ ಬೋವಿ ಕಾಲೋನಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ಮತ್ತು ಚರಂಡಿ ನಿರ್ಮಿಸಲು 3 ಲಕ್ಷ ರೂ ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಕಾಮಗಾರಿ ಆರಂಭವಾಗಿಲ್ಲ ರಸ್ತೆ, ಚರಂಡಿ ಇಲ್ಲದಿರುವುದರಿಂದಾಗಿ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಕಾಲೋನಿಯ ನಿವಾಸಿಗಳು ಬದುಕುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಈ ಹಿನ್ನೆಲೆಯಲ್ಲಿ ನಕಾಶೆಯಲ್ಲಿ ಇರುವಂತೆಯೇ ಕಾಲೋನಿಯಲ್ಲಿ ರಸ್ತೆ ಮತ್ತು ಚರಂಡಿಯನ್ನು ತಕ್ಷಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಮಾಗುಂಡಿಯ ಮಹಲಗೋಡಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕೊಠಡಿಗಳು ಕುಸಿಯುವ ಹಂತದಲ್ಲಿರುವುದರಿಂದ ಅದನ್ನು ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಶೃಂಗೇರಿ ಕ್ಷೇತ್ರ ಸಂಚಾಲಕ ಎಸ್.ಹನುಮಂತ, ನರಸಿಂಹರಾಜಪುರ ತಾಲ್ಲೂಕು ಸಂಚಾಲಕ ಗಂಗಯ್ಯ, ಬಾಳೆಹೊನ್ನೂರು ಹೋಬಳಿ ಸಂಚಾಲಕ ಮಂಜು ಹಾಜರಿದ್ದರು.