ಚಿಕ್ಕಮಗಳೂರು : ಎಐಟಿ ಕಾಲೇಜಿನಲ್ಲಿ ಸಾಹಿತ್ಯದ ಸಿಂಚನ…

305
firstsuddi

ಚಿಕ್ಕಮಗಳೂರು : ನಗರದ ಎಐಟಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ವತಿಯಿಂದ ಶುಕ್ರವಾರ ನಡೆದ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮ ವರಕವಿ ದ.ರಾ.ಬೇಂದ್ರೆ ಅವರ ಸಾಹಿತ್ಯದ ರಸದೌತಣವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿತು.
ಉಪನ್ಯಾಸ ನೀಡಿದ ಸಾಹಿತಿ ಡಾ|| ಹೆಚ್.ಎಸ್.ಸತ್ಯನಾರಾಯಣ ವರಕವಿಯ ಕಾವ್ಯಗಳನ್ನು, ಅವುಗಳನ್ನು ಬರೆದ ಸಂದರ್ಭಗಳನ್ನು ಮತ್ತು ಕವಿತೆಗಳ ಪ್ರತಿ ಪದಗಳನ್ನು ವಿದ್ಯಾರ್ಥಿಗಳೆದುರು ಎಳೆಎಳೆಯಾಗಿ ತೆರೆದಿಡುವ ಮೂಲಕ ಅವರನ್ನು ಮಂತ್ರಮುಗ್ದಗೊಳಿಸಿದರು.
ತಾವು ಬಾಲಕರಾಗಿದ್ದಾಗ ಬೇಂದ್ರೆ ಅವರನ್ನು ಭೇಟಿ ಮಾಡಿದ ಸಂದರ್ಭ, ಅವರ ಸರಳತೆ ಹಾಗೂ ಸ್ವಭಾವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಸತ್ಯನಾರಾಯಣ ವರಕವಿ ತಮ್ಮ ಬದುಕಿನಲ್ಲಿ ಅನುಭವಿಸಿದ ನೋವು, ನಲಿವು ಸೇರಿದಂತೆ ವಿವಿಧ ಸನ್ನಿವೇಶಗಳನ್ನು ಬಿಚ್ಚಿಡುವ ಮೂಲಕ ವಿದ್ಯಾರ್ಥಿಗಳ ಕಣ್ಣಲ್ಲಿ ನೀರಾಡುವಂತೆ ಮಾಡಿದರು.
ಜಿಲ್ಲಾ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಬೇಂದ್ರೆ ರಚಿತ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ ಡಾ|| ದ.ರಾ.ಬೇಂದ್ರೆ ಅವರು ಜಗದಕವಿ, ಯುಗದ ಕವಿ, ಆಡು ಭಾಷೆಯಲ್ಲಿರುವ ಅವರ ಕಾವ್ಯಗಳು ಮನಸ್ಸಿಗೆ ಮುದ ನೀಡುತ್ತವೆ ಎಂದರು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಬೇಂದ್ರೆ ಅವರು ಮಾನವೀಯತೆಯ ಮೇರು, ಅಂತಹ ವರಕವಿಯ ನೆನಪು ಎಂದಿಗೂ ಮಾಸಬಾರದು ಅದು ಮುಂದಿನ ತಲೆಮಾರಿಗೆ ಉಳಿಯಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಜ್ಞಾನಪೀಠ ಪುರಸ್ಕøತ ಸಾಹಿತಿಗಳ ಬದುಕು ಮತ್ತು ಬರಹಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ಇದೇ ವೇಳೆ ಬೇಂದ್ರೆ ಅವರ ಕುರಿತ ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಲೇಖಕಿ ನಾಗಶ್ರೀ ತ್ಯಾಗರಾಜ್ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ ಸ್ವಾಗತಿಸಿದರು, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ವಂದಿಸಿದರು.