ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸೇರಲು ಅಡ್ಡವಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದಿದ್ದು, ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪತಿ ನವೀನ್ (28) ಮೃತ ದುರ್ದೈವಿ, ಕಡೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜಯ್ ಬಂಧಿತ ಇಬ್ಬರು ಆರೋಪಿಗಳು. ಗಂಡನಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ ಪಾವನಾ ಬಳಿಕ ಪ್ರೇಮಿಯ ಜೊತೆ ಬೈಕ್‌ನಲ್ಲಿ ಮೃತದೇಹವನ್ನ ತೆಗೆದುಕೊಂಡು ಹೋಗಿ ಕೆರೆಗೆ ಎಸೆದು ಬಂದಿದ್ದಾಳೆ.
ಬಳಿಕ ಇದೊಂದು ಸಹಜ ಸಾವು ಅಂತಾ ಬಿಂಬಿಸಿ ನಾಟಕವಾಡಿದ್ದಾಳೆ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿದೆ. ಮೃತ ನವೀನ್ ಕುಮಾರ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.
ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದು ವರದಿ ಬಂದ ನಂತರ ತನಿಖೆಯ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಇದು ಸಹಜ ಸಾವಲ್ಲ ಅನ್ನೋದು ಖಾತ್ರಿಯಾಗಿದೆ. ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಪಾವನಾ, ಸಂಜಯ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಸಂಜಯ್ ಜೊತೆ ಸೇರಿಸಲು ನವೀನ್ ಅಡ್ಡಗಾಲಾಗಿದ್ದರಿಂದ ಪತಿಯನ್ನ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.










