ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಭಜರಂಗದಳ ಮುಖಂಡನಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.
ಭಜರಂಗದಳ ಮಾಜಿ ಸಂಚಾಲಕ ತುಡುಕೂರು ಮಂಜುನಾಥ್ ಅವರನ್ನು ಗಡಿಪಾರು ಮಾಡಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಾ.14ರಂದು ಜಿಲ್ಲಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.
“ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಚಿಕ್ಕಮಗಳೂರು ಜಿಲ್ಲೆಯು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ತನ್ನ ರಾಜಕೀಯ ಲಾಭಕ್ಕೋಸ್ಕರ ಮತೀಯ ಗಲಭೆಯನ್ನುಂಟುಮಾಡುವ ಸಾಧ್ಯತೆ ಇದೆ. ಅಲ್ಲದೆ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ” ವಿವಾದ ವಿಷಯದಲ್ಲಿ ಮಧ್ಯೆ ಪ್ರವೇಶಿಸುತ್ತಿದ್ದು, ಈ ವಿಚಾರದಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ” ಎಂಬ ಕಾರಣ ಸೇರಿದಂತೆ 17 ಕಾರಣಗಳನ್ನು ನೀಡಿ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕು, ಆಲ್ಲೂರು ಹೋಬಳಿ, ಶುಡುಕೂರು ಗ್ರಾಮದ ವಾಸಿ ತುಡುಕೂರು ಮಂಜುನಾಥ್ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸಮಾಜಘಾತುಕ ಚಟುವಟಿಕೆಯಿಂದ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಭದ್ರತೆ ಭಂಗ ಮಾಡಿ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ)(ಬಿ) ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಸಂಘಟನೆ ಹೋರಾಟದಲ್ಲಿ ಮಂಜುನಾಥ್ ವಿರುದ್ಧ 24 ಪ್ರಕರಣ ದಾಖಲಾಗಿದ್ದವು. 24ರ ಪೈಕಿ 22 ಪ್ರಕರಣಗಳು ಖುಲಾಸೆಯಾಗಿವೆ.










