ಚಿಕ್ಕಮಗಳೂರು: ಕಾಡಾನೆಯೊಂದು ಮನೆಯ ಪಕ್ಕದಲ್ಲಿದ್ದ ಶೆಡ್ಗೆ ನುಗ್ಗಿ ಅಲ್ಲಿದ್ದ ಕಾರನ್ನು ಜಖಂಗೊಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೇರಿಕೆ ಗ್ರಾಮದಲ್ಲಿ ನಡೆದಿದೆ.
ಹೇರಿಕೆ ಗ್ರಾಮದ ಮಹೇಶ್ ಎಂಬುವವರ ಕಾರು ಭಾಗಶಃ ಜಖಂಗೊಂಡಿದೆ. ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಬಂದಿದ್ದ ಕಾಡಾನೆ ಶೆಡ್ ಉರುಳಿಸಿದೆ. ಕಾರಿನ ಹಿಂಭಾಗದ ಗ್ಲಾಸ್ ಸಂಪೂರ್ಣ ಪುಡಿಯಾಗಿದೆ. ಮೂಡಿಗೆರೆ ಅರಣ್ಯ ಇಲಾಖೆ ಆನೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಊರುಬಗೆ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಮೂರ್ನಾಲ್ಕು ಕಾಡಾನೆಗಳು ಸತತವಾಗಿ ಗ್ರಾಮದೊಳಗೆ ದಾಳಿಯಿಡುತ್ತಿವೆ. ಹಗಲು ರಾತ್ರಿಯೆನ್ನದೇ ರಸ್ತೆಯಲ್ಲಿ, ಕಾಫಿ ತೋಟದಲ್ಲಿ ಓಡಾಡುತ್ತಿವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ನಿಯಂತ್ರಿಸುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೆಡ್ ಮತ್ತು ಕಾರು ಜಖಂ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.










