ಚಿಕ್ಕಮಗಳೂರು : ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತ ಸೇವಾದಳದ ಜಿಲ್ಲಾ ಮತ್ತು ತಾಲ್ಲೂಕು ಘಟಕ ಹಾಗೂ ಆವತಿಯ ಅಂಬೇಡ್ಕರ್ ವಸತಿ ಶಾಲೆ ವತಿಯಿಂದ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಯೋಗ ದಿನದ ಅಂಗವಾಗಿ ನಸುಕಿನಲ್ಲಿ ವಿದ್ಯಾರ್ಥಿಗಳು, ಸೇವಾದಳದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಎಐಟಿ ವೃತ್ತದಿಂದ ಕ್ರೀಡಾಂಗಣದವರೆಗೆ ಯೋಗ ನಡಿಗೆ ನಡೆಸಿದರು.
ನಂತರ ಕ್ರೀಡಾಂಗಣದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನ ಮತ್ತು ಪ್ರಾಣಾಯಾಮವನ್ನು ಸಾಮೂಹಿಕವಾಗಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಐ.ಬಿ.ಶಂಕರ್ ಯೋಗಾಭ್ಯಾಸ ಪ್ರಾಣಾಯಾಮ ಕೇವಲ ಯೋಗ ದಿನಾಚರಣೆಗಷ್ಟೇ ಸೀಮಿತವಾಗಬಾರದು ಅದನ್ನು ಪ್ರತಿದಿನ ಎಲ್ಲರೂ ಕ್ರಮಬದ್ದವಾಗಿ ಮಾಡಬೇಕು ಎಂದು ಸಲಹೆ ಮಾಡಿದರು.
ಭಾರತ ಸೇವಾದಳದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್ ಮಾತನಾಡಿ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.
ಸಾಹಿತಿ ಬಾಣೂರು ಚನ್ನಪ್ಪ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಕಾರ್ಯದರ್ಶಿ ಹಂಪಯ್ಯ, ನಿವೃತ್ತ ಶಿಕ್ಷಕ ಬಿ.ಆರ್.ಕುಮಾರಪ್ಪ, ಶಿಕ್ಷಕ ಪುನೀತ್, ಓಂಕಾರಪ್ಪ, ಪುಟ್ಟಪ್ಪ, ವಸಂತ ಹಾಜರಿದ್ದರು.










