ಚಿಕ್ಕಮಗಳೂರು : ಮೀನುಗಾರಿಕೆ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತ ಮೀನುಗಾರರು ಮೀನು ಮರಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂತಿಮವಾಗಿ ತಾವೇ ಕೆರೆಯ ಸ್ವಚ್ಚತೆಗೆ ಮುಂದಾದ ಘಟನೆ ಹಿರೇಮಗಳೂರಿನಲ್ಲಿ ಬುಧವಾರ ನಡೆಯಿತು.
ಶ್ರೀ ಗಂಗಾ ಪ.ಜಾತಿ/ಪ.ವರ್ಗದ ಮೀನುಗಾರರ ವಿವಿದೋದ್ದೇಶ ಸಹಕಾರ ಸಂಘ ಹಿರೇಮಗಳೂರಿನ ದೊಡ್ಡ ಕೆರೆಯನ್ನು ಮೀನುಗಾರಿಕೆ ಇಲಾಖೆಯಿಂದ ಐದು ವರ್ಷಗಳ ಅವಧಿಗೆ ನೇರ ಗುತ್ತಿಗೆಗೆ ಪಡೆದಿದೆ, ಸಂಘದ ಅಡಿಯಲ್ಲಿ 35 ಪರಿಶಿಷ್ಟ ಕುಟುಂಬಗಳ ಮೀನುಗಾರರು ಸಾಲಸೋಲ ಮಾಡಿ 7 ಲಕ್ಷ ರೂ ವ್ಯಯಿಸಿ ಇಲಾಖೆಯಿಂದ ಮೀನು ಮರಿಗಳನ್ನು ಖರೀದಿಸಿ ಕೆರೆಯಲ್ಲಿ ಸಾಕಾಣಿಕೆ ಮಾಡಿದ್ದಾರೆ.
ಆದರೆ ಕಳೆದ 4 ವರ್ಷಗಳಿಂದ ಇಡೀ ಕೆರೆಯಲ್ಲಿ ಜೊಂಡು ಬೆಳೆದಿದೆ, ಇದರ ಜೊತೆಗೆ ನಗರದ ಚರಂಡಿ ನೀರನ್ನು ಕೆರೆಗೆ ನೇರವಾಗಿ ಬಿಡಲಾಗುತ್ತಿದೆ ಇದರಿಂದಾಗಿ ಆಮ್ಲಜನಕದ ಕೊರತೆಯಿಂದ ಮೀನುಗಳು ಸಾಯಲಾರಂಭಿಸಿವೆ.
ಕೆರೆಯಲ್ಲಿ ಸಾಕಾಣಿಕೆ ಮಾಡಿರುವ ಮೀನುಗಳನ್ನು ಅವಲಂಬಿಸಿ ಬದುಕುತ್ತಿರುವ 35 ದಲಿತ ಮೀನುಗಾರರ ಕುಟುಂಬಗಳು ಹಲವಾರು ಬಾರಿ ಜೊಂಡನ್ನು ತೆಗೆದು ಕೆರೆಯನ್ನು ಸ್ವಚ್ಚಗೊಳಿಸುವಂತೆ ಸಂಘದ ನೇತೃತ್ವದಲ್ಲಿ ಮೀನುಗಾರಿಕೆ ಮತ್ತು ನೀರಾವರಿ ಇಲಾಖೆಗೆ ಮನವಿ ಮಾಡಿ ಕೆರೆ ಸ್ವಚ್ಚಗೊಳಿಸದಿದ್ದಲ್ಲಿ ಮೀನುಗಳು ಸಾಯುವ ಆತಂಕ ವ್ಯಕ್ತಪಡಿಸಿವೆ.
ಇಲಾಖೆ ಅಧಿಕಾರಿಗಳ ನೆರವಿಗಾಗಿ ಕಾದು ಕಾದು ಸುಸ್ತಾದ ಮೀನುಗಾರರು ಕಲುಷಿತ ನೀರು ಮತ್ತು ಜೊಂಡಿನಿಂದ ಇನ್ನು 15-20 ದಿನಗಳಲ್ಲಿ ಮೀನುಗಳು ಸಾಯುವುದನ್ನು ಮನಗಂಡು ಪಡೆದ ಸಾಲವನ್ನು ಕಟ್ಟುವ ಬಗೆ ಮತ್ತು ನಷ್ಟದಿಂದಾಗಿ ಬೀದಿಗೆ ಬೀಳುವ ಆತಂಕದಲ್ಲಿ ಕೆರೆ ಸ್ವಚ್ಚತೆಗೆ ಅಂತಿಮವಾಗಿ ಮುಂದಾಗಿದ್ದಾರೆ.
ಗುತ್ತಿಗೆದಾರ ಮದನ್ಶೇಖರ್ ಅವರು ಹಿಟಾಚಿ, ಟ್ರ್ಯಾಕ್ಟರ್ ಮತ್ತು ಸಾಮಾಗ್ರಿಗಳನ್ನು ಉಚಿತವಾಗಿ ನೀಡುವ ಮೂಲಕ ಮೀನುಗಾರರ ನೆರವಿಗೆ ಬಂದಿರುವ ಹಿನ್ನೆಲೆಯಲ್ಲಿ ಕೆರೆಯ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ.
ಪೂರ್ತಿ ಕೆರೆಯನ್ನು ಸ್ವಚ್ಚಗೊಳಿಸಲು ತಮ್ಮಿಂದ ಸಾಧ್ಯವಾಗುವುದಿಲ್ಲ, ಸ್ವಚ್ಚಗೊಳಿಸದಿದ್ದಲ್ಲಿ ಸಾಕಿರುವ ಮೀನುಗಳು ಸತ್ತು ಅದನ್ನೇ ನಂಬಿರುವ ಮೀನುಗಾರರ ಕುಟುಂಬಗಳು ಬೀದಿಗೆ ಬೀಳುತ್ತವೆ ಹಾಗಾಗಿ ಮೀನುಗಾರಿಕೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಈಗಲಾದರೂ ನಮ್ಮ ನೆರವಿಗೆ ಧಾವಿಸಬೇಕು ಎಂದು ಶ್ರೀ ಗಂಗಾ ಪ.ಜಾತಿ/ಪ.ವರ್ಗದ ಮೀನುಗಾರರ ವಿವಿದೊದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ.ಧರ್ಮೇಶ್ ಒತ್ತಾಯಿಸಿದ್ದಾರೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮೀನುಗಾರಿಕೆ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕೆರೆಯ ಸ್ವಚ್ಚತೆಗೆ ಮುಂದಾದ...










