ಚಿಕ್ಕಮಗಳೂರು : ರಾಜ್ಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಪ್ರತ್ಯೇಕ ಟಿ.ವಿ ಯನ್ನು ಆರಂಭಿಸುವಂತೆ ಬಿಎಸ್‍ಪಿ ವತಿಯಿಂದ ಸರ್ಕಾರಕ್ಕೆ ಒತ್ತಾಯ…

207
firstsuddi

ಚಿಕ್ಕಮಗಳೂರು : ಮಳೆ, ಬೆಳೆ ಮತ್ತು ಕೃಷಿ ಬಗ್ಗೆ ನಾಡಿನ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಪ್ರತ್ಯೇಕ ಟಿ.ವಿ ಯನ್ನು ಆರಂಭಿಸುವಂತೆ ಜಿಲ್ಲಾ ಬಹುಜನ ಸಮಾಜ ಪಕ್ಷ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸುತ್ತಿವೆ, ಇದರಿಂದಾಗಿ ಮಳೆಯನ್ನೇ ನಂಬಿ ಬೆಳೆ ಬೆಳೆದ ರೈತರು ನಷ್ಟಕ್ಕೀಡಾಗಿ ಸಾಲ ತೀರಿಸಲಾಗದೇ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ ಎಂದರು.
ಇದರ ಜೊತೆಗೆ ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಭೂಮಿಯಲ್ಲಿ ಏನನ್ನು ಬಿತ್ತನೆ ಮಾಡಬೇಕು ಎಂಬುದರ ಬಗ್ಗೆ ಅರಿವಿಲ್ಲದ ರೈತರು ಅವೈಜ್ಞಾನಿಕವಾಗಿ ಕೃಷಿ ಮಾಡುವ ಮೂಲಕ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಮಾರುಕಟ್ಟೆ ದರದ ಮಾಹಿತಿ ಇಲ್ಲದೇ ಆರ್ಥಿಕವಾಗಿ ನಷ್ಟಕ್ಕೊಳಗಾಗುತ್ತಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ರೈತರಿಗಾಗಿಯೇ ಟಿ.ವಿ ಒಂದನ್ನು ಆರಂಭಿಸಬೇಕು, ಅದರ ಮೂಲಕ ಮಳೆ, ಬೆಳೆ, ಕೃಷಿಯ ವಿಧಾನ, ಕೃಷಿಗಾಗಿ ಸರ್ಕಾರದಿಂದ ರೈತರಿಗೆ ದೊರೆಯುವ ಸವಲತ್ತುಗಳು, ಬೆಳೆ ವಿಮೆ. ಮಾರುಕಟ್ಟೆ ದರದ ದೈನಂದಿನ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ರೈತರಿಗೆ ನಿರಂತರವಾಗಿ ನೀಡಬೇಕು ಎಂದು ತಿಳಿಸಿದರು.
ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಕೃಷಿಯಲ್ಲಿ ಯಶಸ್ವಿಯಾದ ರೈತರ ಯಶೋಗಾಥೆಯನ್ನು ನೂತನ ಟಿ.ವಿ ಯಲ್ಲಿ ಪ್ರಸಾರ ಮಾಡುವ ಮೂಲಕ ಕೃಷಿಕರನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ನಗರಾಧ್ಯಕ್ಷ ಹನುಮಂತರಾಯ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಖಜಾಂಚಿ ವಾಹೀದ್ ಜಾನ್, ಉಪನ್ಯಾಸಕರಾದ ಜೋಸೇಫ್, ಸುರೇಶ್, ಪೀಟರ್, ದಿನೇಶ್, ಎಂ.ಜೋಸೇಫ್ ಹಾಜರಿದ್ದರು.