ಬೆಂಗಳೂರು : ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾಗಿರುವ ಹಿನ್ನಲೆಯಲ್ಲಿ ‘ಜನೋತ್ಸವ ಕಾರ್ಯಕ್ರಮ’ವನ್ನು ರದ್ದು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಆರ್ ಟಿ ನಗರದ ನಿವಾಸದಲ್ಲಿ ನಿನ್ನೆ ಮಧ್ಯರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ನನಗೆ ನಿನ್ನೆ ರಾತ್ರಿ ಪ್ರವೀಣನ ಹತ್ಯೆ ಸುದ್ದಿ ಬಂದಾಗ ಬಹಳ ಸಂಕಟ ನೋವು ಉಂಟಾಯಿತು. ಒಬ್ಬ ಅತ್ಯಂತ ಅಮಾಯಕನನ್ನು ಯೋಜನಾ ಬದ್ಧವಾಗಿ ಕೊಲೆಯಾಗಿರುವುದು ಅಮಾನವೀಯ. ಹರ್ಷನ ಕೊಲೆ ಆದ ಕೆಲವೇ ದಿನಗಳಲ್ಲಿ ಈ ಪ್ರಕರಣ ಆಗಿರುವುದು ನೋವು ತಂದಿದೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಎಂದರು.
ಹತ್ಯೆಯಾದ ಆ ಹುಡುಗನ ತಾಯಿಯ ಆಕ್ರಂದನ, ಪತ್ನಿಯ ಆಕ್ರಂದನ ಹಾಗೂ ಹರ್ಷನ ತಾಯಿಯ ನೋವನ್ನ ನೋಡಿ ಈ ಸಂದರ್ಭದಲ್ಲಿ ನಾವು ಯಾವುದೇ ರೀತಿಯ ಕಾರ್ಯಕ್ರಮ ಮಾಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ, ದೊಡ್ಡಬಳ್ಳಾಪುರದ ಕಾರ್ಯಕ್ರಮವನ್ನು ನಾನು ರದ್ದು ಮಾಡಿದ್ದೇನೆ, ನಮ್ಮ ಪಕ್ಷವೂ ಕಾರ್ಯಕ್ರಮ ರದ್ದು ಮಾಡಿದೆ ಮತ್ತು ವಿಧಾನಸೌಧದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮವನ್ನು ಕೂಡ ರದ್ದು ಮಾಡಿದ್ದೇವೆ ಎಂದು ಹೇಳಿದರು.
ಒಂದೆಡೆ ನಮ್ಮ ಯುವ ಕಾರ್ಯಕರ್ತನ ಕೊಲೆಯಾಗಿದೆ. ಇದೇ ವೇಳೆ ನಮ್ಮ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದೆ. ಯಡಿಯೂರಪ್ಪನವರು ತಂದಿರುವ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಹಲವು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ಕೊಡಬೇಕೆನ್ನುವ ಹಂಬಲ ನಮ್ಮದು. ಇದೇ ಕಾರಣಕ್ಕೆ ಉತ್ಸವಕ್ಕಿಂತ ಜನೋತ್ಸವ ಮಾಡಲು ಉದ್ದೇಶಿಸಿದ್ದೆವು. ಜನಪರವಾಗಿ ನಾವೇನು ಕೆಲಸ ಮಾಡಿದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಬೇಕಿತ್ತು. ಸಂಭ್ರಮಿಸಲು ಅಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದರು.










