ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿಕೊಂಡು ಹೋದ ದುಷ್ಕರ್ಮಿಗಳು…

54
firstsuddi

ಗದಗ: ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋದ ಘಟನೆ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನಿನಲ್ಲಿ ನಡೆದಿದೆ.

ಸಣ್ಣ ಹನುಮಪ್ಪ ಅಲಿಯಾಸ್ ಕುಂಟೆಪ್ಪ ವಜ್ರದ್ (65) ಕೊಲೆಗೀಡಾದ ರೈತ. ಮೃತ ರೈತ ಕಾರ್ಮಿಕ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ನಿವಾಸಿ. ಈತ ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬ ರೈತರ ಜಮೀನಲ್ಲಿ ಬೆಳೆ ಕಾಯುತ್ತಿದ್ದ. ಜಮೀನಿನ ಮಾಲಿಕರು ನಿತ್ಯ ಊಟ ಕೊಟ್ಟು ತಿಂಗಳಿಗೆ 7,000 ರೂ. ಕೊಡುವುದಾಗಿ ಹೇಳಿ ಜಮೀನು ಕಾಯುವಂತೆ ಹೇಳಿದ್ದರು. ಕಳೆದ ಒಂದು ತಿಂಗಳಿನಿಂದ ಮೆಣಸಿನಕಾಯಿ ಕಾಯುತ್ತಿದ್ದ. ಆದರೆ ಬೆಳಗ್ಗೆ ಮಾಲೀಕರು ಬಂದು ನೋಡಿದಾಗ ಕುಂಟೆಪ್ಪನ ದೇಹ ಮಾತ್ರ ಇದ್ದು, ರುಂಡ ಇಲ್ಲವಾಗಿದೆ.

ಕೂಡಲೇ ಜಮೀನಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗದಗ ಎಸ್.ಪಿ ಬಿ.ಎಸ್ ನೇಮಗೌಡ, ಡಿವೈಎಸ್‍ಪಿ ಸುಂಕದ್ ಹಾಗೂ ಗ್ರಾಮೀಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಕಾರ್ಮಿಕನ ರುಂಡ ಹಾಗೂ ದುಷ್ಕರ್ಮಿಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.