ಶ್ರೀನಗರ : ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಓರ್ವ ಕಾಶ್ಮೀರಿ ಪಂಡಿತ ಸಾವನ್ನಪ್ಪಿದ್ದು, ಮತ್ತೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ.
ಇಂದು ಬೆಳಗ್ಗೆ ಭಯೋತ್ಪಾದಕರು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟಿಪೋರಾ ಪ್ರದೇಶದಲ್ಲಿ ಇರುವ ಆಪಲ್ ಆರ್ಕೇಡ್ ನಲ್ಲಿ ನಾಗರಿಕರ ಮೇಲೆ ಏಕಾಏಕಿ ಗುಂಡಿನ ದಳಿ ನಡೆಸಿದರು. ಈ ವೇಳೆ, ಓರ್ವ ನಾಗರಿಕ ಮೃತಪಟ್ಟರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರೂ ಕೂಡಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಕಾಶ್ಮೀರ ವಲಯ ಪೊಲೀಸರು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಗಾಯಾಳುವನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಸಹೋದರ ಪುನೀತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕಳೆದ 3 ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂನಲ್ಲಿ ಸರ್ಕಾರಿ ಕಚೇರಿಯಲ್ಲೇ ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಘಟನೆ ಕಾಶ್ಮೀರಿ ಪಂಡಿತರ ಆಕ್ರೋಶಕ್ಕೆ ಗುರಿಯಾಗಿತ್ತು. ಹತ್ಯೆ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದ್ದರು. ಅಂದಿನಿಂದ ಇಂದಿನವರೆಗೂ ಸರಿ ಸುಮಾರು 5 ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ತಮ್ಮ ಮೇಲೆ ದಾಳಿ ನಡೆಯಬಹುದು ಎಂಬ ಭಯದಲ್ಲೇ ಅವರು ಜೀವನ ನಡೆಸುವಂತಾಗಿದೆ. ಸರ್ಕಾರಿ ಕೆಲಸ ಇದ್ದರೂ ಮಾಡಲಾಗದಂಥಾ ಪರಿಸ್ಥಿತಿ ಇದೆ. ಹೀಗಾಗಿ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ತಮ್ಮನ್ನು ಜಮ್ಮುಗೆ ಸ್ಥಳಾಂತರ ಮಾಡುವಂತೆ ಕಾಶ್ಮೀರಿ ಪಂಡಿತರು ಸರ್ಕಾರವನ್ನು ಆಗ್ರಹಿಸಿದ್ದಾರೆ.










