ಬೆಂಗಳೂರು : ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜ್ ಕೊಡಬೇಕು. ತಾಲ್ಲೂಕಿಗೆ ಒಂದು ಮೆಡಿಕಲ್ ಕಾಲೇಜ್ ಕೊಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ನಗರದ ಡಾಲರ್ಸ್ ಕಾಲೋನಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಕಾಲೇಜ್ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಮೆಡಿಕಲ್ ಕಾಲೇಜು ಜಿಲ್ಲೆಗೆ ಒಂದು ಕೊಡಬೇಕು. ತಾಲ್ಲೂಕಿಗೆ ಒಂದು ಮೆಡಿಕಲ್ ಕಾಲೇಜ್ ಕೊಡಲು ಆಗುವುದಿಲ್ಲ. ಈ ಬಗ್ಗೆ ನಾನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಳಿ ಮಾತನಾಡುತ್ತೇನೆ ಎಂದರು. ಇದೇ ವೇಳೆ ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ತೆಗೆಯುವ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಟಿಪ್ಪು ಸುಲ್ತಾನ್ ಪಠ್ಯದ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಪಠ್ಯದ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿಯನ್ನು ರಚನೆ ಮಾಡಿದ್ದೇವೆ. ಸಮಿತಿಯ ವರದಿ ಬಂದ ಬಳಿಕ ನಿಧಾರ ಕೈಗೊಳ್ಳುತ್ತೇವೆ ಎಂದರು.










