ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಜುಲೈ ಕೊನೆಯ ವಾರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದ್ದು, ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಸದ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪ್ರಕಟಿಸಿದೆ.
ಪರೀಕ್ಷಾ ಮಂಡಳಿಯ ವೆಬ್ ಸೈಟ್ www.sslc.Karnataka.gov.in ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿದೆ. ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಯಾಗಿದ್ದು, ಪ್ರತಿ ವಿಷಯಕ್ಕೆ ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮೂರು ಗಂಟೆಗಳ ಕಾಲ ಪರೀಕ್ಷೆ ನಡೆಯಲಿದೆ. ಉತ್ತರಗಳನ್ನು ಒಎಂಆರ್ ಶೀಟ್ ನಲ್ಲಿ ನಮೂದಿಸಬೇಕು. ಒಎಂಆರ್ ಶೀಟ್ ಮಾದರಿಯೂ ಪ್ರಕಟವಾಗಿದ್ದು, ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಪ್ರಕಟವಾಗಲಿದೆ.
ಪ್ರಶ್ನೆಪತ್ರಿಕೆ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿ ಅಭ್ಯಾಸ ಮಾಡಲು ಸೂಚಿಸಲಾಗಿದ್ದು, ಶಿಕ್ಷಕರಿಗೂ ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ.










