ಚಿಕ್ಕಮಗಳೂರು: ಹಿರೇಕೋಡಿ ಆಶ್ರಮದ ಜೈನಮುನಿ ನಂದಿ ಮಹಾರಾಜ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಯ ಬಸವ ತಪೋವನ ವಿಶ್ವಧರ್ಮ ಪೀಠದ ಶ್ರೀ ಜಯ ಬಸವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಜೈನ ಮುನಿಯ ಹತ್ಯೆ ಮಾನವೀಯತೆಯ ಪತನವಾಗಿದೆ. ಈ ಪೈಶಾಚಿಕ ಕೃತ್ಯದಿಂದಾಗಿ ಮನುಷ್ಯ ಮನುಷ್ಯರನ್ನೇ ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಲೆ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಸ್ವಾಮೀಜಿ, ಸರ್ವಸ್ವವನ್ನೂ ತ್ಯಾಗ ಮಾಡಿದ ಮುನಿಗೆ ಕರೆಂಟ್ ಶಾಕ್ ನೀಡಿ ಸಾಯಿಸಿ ಅವರ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಯೊಳಗೆ ಎಸೆದು ಪೈಶಾಚಿಕತೆ ಮೆರೆದಿರುವ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು. ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.










