ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಗಣ್ಯರ ಸಂತಾಪ…

307
firstsuddi

ಬೆಂಗಳೂರು : ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಹಿರಿಯ ಸಾಹಿತಿ,ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ನಾಡಿನ ಬಹುಮುಖ್ಯ ಸಾಕ್ಷಿಪ್ರಜ್ಞೆಯ ದನಿ ಮೌನವಾದಂತಾಗಿದೆ. ಈ ದುರಿತದ ಕಾಲದಲ್ಲಿ ಅವರು ನಮ್ಮೊಡನೆ ಇನ್ನಷ್ಟು ಕಾಲ ಇರಬೇಕಿತ್ತು. ಅವರ ಸಾವಿನ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು  ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಗಿರಿಶ್ ಕಾರ್ನಾಡ್ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಂತಾಪ ಸೂಚಿಸಿದ್ದು, ದೇಶ ಕಂಡ ಅತ್ಯುತ್ತಮ ರಂಗಕರ್ಮಿ ಹಾಗೂ ಬರಹಗಾರರಲ್ಲೊಬ್ಬರಾದ ಜ್ಞಾನಪೀಠ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಅಗಲಿಕೆಯ ವಿಚಾರ ತಿಳಿದು ದಿಗ್ಭ್ರಮೆಯಾಗಿದೆ. ಕನ್ನಡ ಮತ್ತು ಭಾರತ ಸಾಹಿತ್ಯ ಹಾಗೂ ನಾಟಕ ಲೋಕಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರು ಸಂತಾಪ ಸೂಚಿಸಿದ್ದು, ಕನ್ನಡಕ್ಕೆ 7 ನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಅಭಿಮಾನಿ ವರ್ಗ ಹಾಗೂ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.