ನವದೆಹಲಿ : ಭಾರತದ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಓಪನ್ ನ ಮಹಿಳಾ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲಿ ಸೋತ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಉಕ್ರೇನ್ ನ ನಾಡಿಯಾ ಕಿಚೆನೊಕ್ ಜೊತೆ ಆಸ್ಟ್ರೇಲಿಯಾ ಓಪನ್ ನ ಮಹಿಳಾ ಡಬಲ್ಸ್ ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ 4-6,6-7ರ ಅಂತರದಲ್ಲಿ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋಲು ಕಂಡಿದ್ದರು.
ನನ್ನ ನಿವೃತ್ತಿ ನಿರ್ಧಾರಕ್ಕೆ ಹಲವು ಕಾರಣಗಳಿವೆ. ಆಡಬೇಕೆಂದು ನಿರ್ಧರಿಸುವುದು ನನಗೆ ಸರಳವೆನಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೇನೆ. 3 ವರ್ಷದ ನನ್ನ ಪುತ್ರನೊಂದಿಗೆ ನಿರಂತರ ಪ್ರಯಾಣದ ಮೂಲಕ ಆತನನ್ನೂ ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ. ನನ್ನ ದೇಹವೂ ಕ್ಷೀಣಿಸುತ್ತಿದೆ. ಈಗಲೂ ನನ್ನ ಮೊಣಕಾಲು ನೋಯುತ್ತಿದೆ. ಈ ಪಂದ್ಯದಲ್ಲಿ ನಾವು ಸೋತಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ನನಗೆ ವಯಸ್ಸಾಗುತ್ತಿದ್ದಂತೆ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ತಮ್ಮ ನಿರ್ಧಾರಕ್ಕೆ ಪ್ರಮುಖ ಕಾರಣಗಳನ್ನು ಸಾನಿಯಾ ಹೇಳಿದ್ದಾರೆ.
ಸಾನಿಯಾ ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ. ಅವರು ಮಹಿಳೆಯರ ಡಬಲ್ಸ್ ನಲ್ಲಿ ನಂಬರ್ ಒನ್ ರ್ಯಾಂಕಿಂಗ್ ತಲುಪಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಮೂರು ಪ್ರಶಸ್ತಿಗಳನ್ನು ಮಹಿಳೆಯರ ಡಬಲ್ಸ್ ನಲ್ಲಿ ಮತ್ತು ಮೂರು ಮಿಶ್ರ ಡಬಲ್ಸ್ ನಲ್ಲಿ ಗೆದ್ದಿದ್ದಾರೆ.










