ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೇ ಕಾಂಗ್ರೆಸ್ ನಾಯಕರು ಸ್ಫೋಟಕ ಮಾತುಗಳನ್ನಾಡಿದ್ದಾರೆ.
ಹೌದು. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಸಲೀಂ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದಾರೆ. ಇದೇ ವೇಳೆ ಜಲ ಸಂಪನ್ಮೂಲ ಇಲಾಖೆಯ ಕಾಂಟ್ರಾಕ್ಟರ್ ಗಳಾಗಿರುವ ಉಪ್ಪಾರ್, ಜೀ.ಶಂಕರ್ ಹನುಮಂತಪ್ಪರ ಬಗ್ಗೆಯು ಪ್ರಸ್ತಾಪ ಮಾಡಿದ್ದಾರೆ. ವಾರದ ಹಿಂದೆ ಈ ಕಾಂಟ್ರಕ್ಟರ್ ಗಳ ಮೇಲೆ ಐಟಿ ದಾಳಿ ನಡೆದಿತ್ತು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ಇದೆ ಕಾಂಟ್ರಾಕ್ಟರ್ ಗಳು ಇದ್ದರು. ಡಿಕೆಶಿ ಆಪ್ತ ಮುಳಗುಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ಮುಳಗುಂದ 50-100 ಕೋಟಿ ಮಾಡಿದ್ದಾನೆ ಅಂದ್ರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕ ಹಾಕಿ ಎಂದಿದ್ದಾರೆ.
ಸಿದ್ದರಾಮಯ್ಯನವರು ಮಾತನಾಡುವಾಗ ಅವರ ಬಾಡಿ ಲ್ಯಾಂಗ್ವೇಜ್ ನೋಡಿ, ಖಡಕ್ ಮನುಷ್ಯ, ಡಿ ಕೆ ಶಿವಕುಮಾರ್ ಸಾರ್ವಜನಿಕವಾಗಿ ಮಾತನಾಡುವಾಗ ಬಹಳ ಎಮೋಷನಲ್ ಆಗುತ್ತಾರೆ, ಸಾರ್ವಜನಿಕವಾಗಿ ಮಾತನಾಡುವಾಗ ತೊದಲುತ್ತಾರೆ, ಡ್ರಿಂಕ್ಸ್ ಮಾಡುತ್ತಾರಾ, ಅವರು ಡ್ರಿಂಕ್ಸ್ ಮಾಡಲ್ವಲ್ಲ ಲೋ ಬಿಪಿ ಇರ್ಬೇಕು ಎಂದು ಸಲೀಂ ವೇದಿಕೆಯಲ್ಲಿ ವಿ ಎಸ್ ಉಗ್ರಪ್ಪ ಕಿವಿಯಲ್ಲಿ ಹೇಳುತ್ತಾರೆ. ಆಗ ವಿ ಎಸ್ ಉಗ್ರಪ್ಪ, ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಕೊಡಿಸಿದ್ದು ನಾವು ಎಂದು ಹೇಳಿರುವುದೆಲ್ಲ ಆಡಿಯೊ-ವಿಡಿಯೊದಲ್ಲಿ ದಾಖಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿ.ಎಸ್ ಉಗ್ರಪ್ಪ ಅವರು, ಸಲೀಂ ಏನೇ ಹೇಳಿರಬಹುದು, ಅದಕ್ಕೆ ನಾನು ಪ್ರತಿಕ್ರಿಯೆ ನೀಡಲಿಲ್ಲ, ನಾನು ಅವರ ವಿರುದ್ಧವಾಗಿ ಏನೇ ಹೇಳಿದ್ದರೂ ಸಾಬೀತಾದರೆ ಸಾರ್ವಜನಿಕ ಬದುಕಿಗೆ ರಾಜಕೀಯ ನೀಡುತ್ತೇನೆ, ಸಲೀಂ ಹೇಳಿಕೆಗೆ ನಾನು ಅಪ್ಪಿತಪ್ಪಿಯೂ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.










