ಡಿಕೆ ಶಿವಕುಮಾರ್‌ಗೆ ನನ್ನ ಕಂಡ್ರೆ ಭಯ : ರಮೇಶ್ ಜಾರಕಿಹೊಳಿ.

52
firstsuddi

ಬೆಳಗಾವಿ : ಡಿಕೆ ಶಿವಕುಮಾರ್‌ಗೆ ನನ್ನ ಹೆದರಿಕೆ ಇದೆ. ನಾನು ಒಬ್ಬನೇ ಅವನನ್ನು ಎದುರಿಸೋನು. ಇಂತಹ ನೂರು ಸಿಡಿ ಬಂದ್ರೂ ನಾನು ಹೆದರಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಳಾಗಿದ್ದು ರಮೇಶ್ ಜಾರಕಿಹೊಳಿಯಿಂದ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವನ ಹಾಗೇ ನಾನು ಮೋಸ ಮಾಡಿಲ್ಲ, ಷಡ್ಯಂತ್ರ ಮಾಡಿಲ್ಲ. ನಾನು ಚಾಲೆಂಜ್ ಮಾಡಿ ಪಕ್ಷ ಬಿಡುತ್ತೇನೆ ಎಂದು ಹೇಳಿ ರಾಜೀನಾಮೆ ಕೊಟ್ಟಿದ್ದೇನೆ. ನಾನೇನೂ ಯಾವುದಾದರೂ ಹುಡುಗಿ ಕಳಿಸಿ ಕುತಂತ್ರ ಮಾಡಿಲ್ಲ. ಅದನ್ನ ಷಂಡರು ಮಾಡುತ್ತಾರೆ ಹೊರತು ಮನುಷ್ಯರು ಮಾಡಲ್ಲ ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿಯನ್ನೇ ಡಿಕೆಶಿ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವಾಗಿದ್ದರೂ ಗಟ್ಟಿ ಮನುಷ್ಯ, ಸ್ಟ್ರಾಂಗ್ ಮನುಷ್ಯನನ್ನೇ ಟಾರ್ಗೆಟ್ ಮಾಡುತ್ತಾರೆ. ಅವನಿಗಿಂತ ತಾಕತ್ ಇದ್ದರೆ ಅವರನ್ನು ದುರ್ಬಲ ಮಾಡಲು ಷಡ್ಯಂತ್ರ ಮಾಡುತ್ತಾನೆ. ನನ್ನಿಂದಲೇ ಡಿ.ಕೆ.ಶಿವಕುಮಾರ್ ರಾಜಕಾರಣ ಅಂತ್ಯ ಆಗುತ್ತದೆ ನೋಡ್ತಾ ಇರಿ ಎಂದರು.

ತಮ್ಮ ವಿರುದ್ಧದ ಸಿ.ಡಿ ಕೇಸ್ ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ 90ರಿಂದ 110 ಸಿ.ಡಿ ಆತನ ಮನೆಯಲ್ಲಿ ಸಿಕ್ಕಿವೆ. ಇಡೀ ರಾಜ್ಯದ ಜನರ ಸಿ.ಡಿ ಸಿಕ್ಕಿವೆ, ಇದರ ಹಿಂದೆ ಮಹಾನಾಯಕನ ಕುತಂತ್ರದಿಂದ ಆಗಿವೆ. ಸಿಬಿಐ ವಿಚಾರಣೆ ಆದರೆ ಇವು ಹೊರಕ್ಕೆ ಬರುತ್ತೆ. ನಲವತ್ತು ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಅನ್ನೋ ಸಾಕ್ಷಿ ಇದೆ. ಸ್ವತಃ ಅವನೇ ಮಾತಾಡಿದ್ದಾನೆ, ರಮೇಶ್ ಜಾರಕಿಹೊಳಿ ನನ್ನ ಮಿತ್ರ. ಅವನಿಗೆ ಮಾಡಿದ್ದೇನೆ ಸಿ.ಡಿ ಇಟ್ಟು ಕೆಲಸ ಮಾಡ್ತೇನಿ ಅಂತಾ ಆತ ಮಾತಾಡಿರುವ ಸಂಭಾಷಣೆ ಇದೆ. ಹೀಗಾಗಿ ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಡಿಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನ ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ಸಿ.ಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ. ಜನವರಿ 28ಕ್ಕೆ ಅಮಿತ್ ಶಾ ಬರುತ್ತಿದ್ದಾರೆ ಇಲ್ಲಿ ಏನು ಕೇಳಲ್ಲ. ಮುಂದಿನ ವಾರ ದೆಹಲಿಗೆ ತೆರಳಿ ಅಮಿತ್ ಶಾ ಭೇಟಿಯಾಗುತ್ತೇನೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಸಿಬಿಐಗೆ ತನಿಖೆ ವಹಿಸಲು ಮನವಿ ಮಾಡುತ್ತೇನೆ. ಮಹಾನಾಯಕನಿಗೆ ಬುದ್ಧಿ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು.