ಚಿಕ್ಕಮಗಳೂರು: ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ. ಡಿ.ಎಲ್.ವಿಜಯಕುಮಾರ್, ಉಪಾಧ್ಯಕ್ಷರಾಗಿ ಸಿ.ಆರ್.ಪ್ರೇಮ್‍ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರ ಚುನಾವಣೆಯ ನಂತರ ಆದ ಕರಾರಿನಂತೆ ಸಂಘದ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಮತ್ತು ಉಪಾಧ್ಯಕ್ಷ ಕೆ.ವೆಂಕಟೇಶ್ ಪೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸಂಘದ ಸಭಾಂಗಣದಲ್ಲಿ ಇಂದು ಚುನಾವಣೆ ನಡೆಯಿತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಸಂಧ್ಯಾರಾಣಿ ಅವರು ಡಾ.ಡಿ.ಎಲ್.ವಿಜಯಕುಮಾರ್ ಮತ್ತು ಸಿ.ಆರ್.ಪ್ರೇಮ್‍ಕುಮಾರ್ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣೆ ನಂತರ ನಡೆದ ಸರಳ ಸಮಾರಂಭದಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ವಿವಿಧ ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳು ಅಭಿನಂದಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ನೂತನ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಸಂಘದ ಸದಸ್ಯರ ಸಂಖ್ಯೆಯನ್ನು ಮತ್ತು ಠೇವಣಿಯನ್ನು ಹೆಚ್ಚಳ ಮಾಡುವ ಗುರಿಯನ್ನು ತಾವು ಹೊಂದಿದ್ದು, ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ನೂತನ ಉಪಾಧ್ಯಕ್ಷ ಸಿ.ಅರ್.ಪ್ರೇಮ್‍ಕುಮಾರ್ ಮಾತನಾಡಿ, ತಮ್ಮ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡುವಂತೆ ಸಂಘದ ನಿರ್ದೇಶಕರು ಮತ್ತು ಸದಸ್ಯರಿಗೆ ಮನವಿ ಮಾಡಿದರು.
ನಿಕಟ ಪೂರ್ವ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಉಪಾಧ್ಯಕ್ಷ ಕೆ.ವೆಂಕಟೇಶ್ ಪೈ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷರಾದ ಎ.ಎನ್.ಮಹೇಶ್, ಯು.ಟಿ.ನಾಗರಾಜ್, ಸ್ಥಾಪಕ ಉಪಾಧ್ಯಕ್ಷ ಎಸ್.ವಿ.ಬಸವರಾಜಪ್ಪ, ನಿರ್ದೇಶಕರಾದ ಎಂ.ಸಿ.ಶಿವಾನಂದ ಸ್ವಾಮಿ, ಎಚ್.ಆರ್.ಮರುಳಪ್ಪ, ಆರ್.ಚಂದ್ರನಾಯಕ್, ಬಿ.ಎಚ್.ಶಂಕರ್, ಎಂ.ಪಿ.ಗಂಗೇಗೌಡ, ಎಂ.ಎಸ್.ಉಮೇಶ್‍ಕುಮಾರ್, ಡಿ.ಬಿ.ದೀಪಕ್, ಬಿ.ವಿ.ಗೀತಾ, ಡಿ.ಅನುಪಮಾ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಂ.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.










