ಹೈದರಾಬಾದ್: ರಂಗಾ ರೆಡ್ಡಿ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿರುವ ವರದಿಯಾಗಿದೆ. 2 ಸೆಕೆಂಡುಗಳ ಕಾಲ ಭೂಮಿ ಅಲುಗಾಡಿರುವುದು ಅನುಭವಕ್ಕೆ ಬಂದಿದೆ. ತೆಲಂಗಾಣದ ಮುಲುಗುವಿನಲ್ಲಿ ಇಂದು ಬೆಳಗ್ಗೆ 7:27ಕ್ಕೆ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಮುಲುಗು ಹೈದರಾಬಾದ್‍ನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿದೆ. ಸದ್ಯಕ್ಕೆ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ಲಘು ಭೂಕಂಪ ಆಗಿದೆ ಎಂದು ಸ್ಥಳೀಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಭದ್ರಾದ್ರಿ ಕೊತಗುಡೆಂನಲ್ಲಿ 2 ಸೆಕೆಂಡ್‍ಗಳ ಕಾಲ ಭೂಮಿ ಸ್ವಲ್ಪ ಕಂಪಿಸಿದೆ. ವಿಜಯವಾಡದಲ್ಲೂ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ವರದಿಯಾಗಿದೆ. ಜಗ್ಗಯ್ಯಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಭೂಮಿ ಕಂಪಿಸುತ್ತಿದ್ದಂತೆ ಭಯಭೀತರಾದ ಜನರು ಮನೆ, ಅಪಾರ್ಟ್‍ಮೆಂಟ್‍ಗಳಿಂದ ಹೊರಗೆ ಓಡಿ ಬಂದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಲಘು ಭೂಕಂಪ ಆಗಿರುವ ಸುದ್ದಿ ಇದೆ. ಅಷ್ಟೇ ಅಲ್ಲ ತೆಲಂಗಾಣದ ವರಂಗಲ್ ಮತ್ತು ಜಂಟಿ ಖಮ್ಮಂ ಜಿಲ್ಲೆಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ.