ದಕ್ಷಿಣ ಕನ್ನಡದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್‌ಗೆ 1600ಕ್ಕೂ ಅಧಿಕ ಮತಗಳಿಂದ ಜಯ.

32

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಉಪಚುನಾವಣೆ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕಣಕಿಳಿದಿದ್ದ ಕಿಶೋರ್ ಕುಮಾರ್ ಬೊಟ್ಯಾಡಿ 1600ಕ್ಕೂ ಅಧಿಕ ಮತಗಳಿಂದ ವಿಜಯಿಶಾಲಿಯಾಗಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿಯಾಗಿ ಚುನಾವಣೆಗೆ ಭಾಗವಹಿಸಿದ್ದ ರಾಜು ಪೂಜಾರಿ ತೀವ್ರ ಪೈಪೋಟಿ ನೀಡಿ ಸೋಲನ್ನು ಅನುಭವಿಸಿದ್ದಾರೆ. ಈ ಮೂಲಕ ಬಿಜೆಪಿ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದೆ. ಮಂಗಳೂರಿನ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ತಂಬಲು ಅ.ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು.
ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿತ್ತು. ಮಂಗಳೂರು ನಗರದ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಮತ ಎಣಿಕೆ ನಡೆಯಿತು. ಮೊದಲ ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ, ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಿ ನಂತರ ಒಂದನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಯಿತು.
ಈ ಬಾರಿ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಉಪಚುನಾವಣೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯಿಂದ ಕಿಶೋರ್ ಬಿ.ಆರ್, ಕಾಂಗ್ರೆಸ್‍ನಿಂದ ರಾಜು ಪೂಜಾರಿ, ಎಸ್‍ಡಿಪಿಐನಿಂದ ಅನ್ವರ್ ಸಾದತ್.ಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಕಣದಲ್ಲಿದ್ದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿ ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 6,032 ಮತದಾರರಿದ್ದರು. ಇದರಲ್ಲಿ 5,906 ಮಂದಿ ಮತ ಚಲಾಯಿಸಿದ್ದರು. ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಮತ್ತು ಶಾಸಕರು ಮತ್ತು ಹಾಗೂ ಸಂಸದರು ಈ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರಾಗಿದ್ದರು.