ದಸರಾ ಜಂಬೂ ಸವಾರಿ ವೀಕ್ಷಣೆಗೆ ಆನ್‍ಲೈನ್ ಟಿಕೆಟ್ ವ್ಯವಸ್ಥೆ.

31

ಮೈಸೂರು: ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 3 ರಿಂದ 12 ರವರೆಗೆ ದಸರಾ ಸಂಭ್ರಮ ಮೇಳೈಸಲಿದೆ. ಈ ಬಾರಿಯ ದಸರಾವನ್ನು ಇನ್ನಷ್ಟು ವೈಭವಪೂರ್ಣವಾಗಿ ನಡೆಸಲು ಸರಕಾರವು ತೀರ್ಮಾನಿಸಿದೆ. ಈಗಾಗಲೇ ಹಲವು ಕಾರ್ಯಕ್ರಮಗಳ ತಯಾರಿ ನಡೆದಿದ್ದು, ಇನ್ನೇನು ದಸರಾ ನಾಡಹಬ್ಬವನ್ನ ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ಈ ಬಾರಿಯ ದಸರಾ ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಆನ್‍ಲೈನ್ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
ದಸರಾ ಜಂಬೂಸವಾರಿ ಹಾಗೂ ಪಂಚಿನ ಕವಾಯತು ಟಿಕೆಟ್‍ಗಳನ್ನು ಸೆಪ್ಟೆಂಬರ್ 26ರಿಂದ 30ರವರೆಗೆ ಆನ್‍ಲೈನ್‍ನಲ್ಲಿ ಖರೀದಿಸಬಹುದಾಗಿದೆ. ದಸರಾ ಜಾಲತಾಣ https://www.mysoredasara.gov.in/ ಮೂಲಕ ಟಿಕೆಟ್ ಪಡೆಯಬಹುದು. ನಿತ್ಯ ಸಾವಿರ ಟಿಕೆಟ್ ಬಿಡುಗಡೆ ಮಾಡಲಾಗುವುದು. ಗೋಲ್ಡ್ ಕಾರ್ಡ್‍ಗೆ 6,500 ನಿಗದಿಪಡಿಸಿದ್ದು, ಜಂಬೂಸವಾರಿ, ಪಂಜಿನ ಕವಾಯತು, ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ಅರಮನೆಗೆ ಪ್ರವೇಶ ನೀಡಲಾಗುತ್ತದೆ. ಜನರ ಪ್ರತಿಕ್ರಿಯೆ ಗಮನಿಸಿ ಸೀಟುಗಳ ಸಂಖ್ಯೆ ಹೆಚ್ಚಿಸುವುದಾಗಿಯೂ ಮೈಸೂರು ಜಿಲ್ಲಾ ಉಸ್ತುವಾರಿ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಒಂದು ದಸರಾ ಗೋಲ್ಡ್ ಕಾರ್ಡ್ ನಲ್ಲಿ ಒಬ್ಬರು ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಟಿಕೆಟ್ ದರ 3500 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ದರ 1000 ರೂಪಾಯಿ ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯಿಂದ ಸಾರ್ವಜನಿಕರು ಸುಲಭವಅಗಿ ಟಿಕೆಟ್ ಪಡೆಯುವ ಅವಕಾಶವೂ ಸಿಕ್ಕಂತಾಗಿದೆ. ಇದೇ ಸೆಪ್ಟಂಬರ್ 26 ರಿಂದ 30 ರವರೆಗಷ್ಟೇ ಆನ್‍ಲೈನ್ ಟಿಕೆಟ್ ಲಭ್ಯವಿರುತ್ತದೆ.