ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಎಂದಿನಂತೆ ದಕ್ಷಿಣ ಕನ್ನಡವೇ ಫಸ್ಟ್, ಈ ಬಾರಿ ಗದಗ ಲಾಸ್ಟ್…

42
firstsuddi

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ.

11 ಗಂಟೆಗೆ ಅಧಿಕೃತ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.

2024 ರ ದ್ವಿತೀಯ ಪಿಯು ಪರೀಕ್ಷೆಗೆ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ವಿದ್ಯಾರ್ಥಿನಿ ವಿದ್ಯಾಲಕ್ಷ್ಮಿ 598 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು (ಶೇ.97) ಪ್ರಥಮ ಸ್ಥಾನ, ಉಡುಪಿ (96.80%) ಎರಡನೇ ಹಾಗೂ ವಿಜಯಪುರ (94.89%) ಮೂರನೇ ಸ್ಥಾನ, ಉತ್ತರ ಕನ್ನಡ ನಾಲ್ಕನೇ ಹಾಗೂ ಕೊಡಗು ಜಿಲ್ಲೆಯು ಐದನೇ ಸ್ಥಾನ ಪಡೆದಿವೆ. ಗದಗ ಜಿಲ್ಲೆಯು ಕೊನೆಯ ಸ್ಥಾನದಲ್ಲಿದೆ.