ನವದೆಹಲಿ : 2007ರ ದ್ವೇಷ ಭಾಷಣ ಪ್ರಕರಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮ ಜರುಗಿಸಲು ಅನುಮತಿ ನಿರಾಕರಣೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು ವಜಾಗೊಳಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ 2017ರ ಮೇನಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿತ್ತು. 2018ರಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು.
2007ರಲ್ಲಿ ಯೋಗಿ ಆದಿತ್ಯನಾಥ್ ಅವರು ಸಂಸತ್ ಸದಸ್ಯರಾಗಿದ್ದಾಗ ದ್ವೇಷಪೂರಿತ ಭಾಷಣ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಇತರ ಹಲವರ ವಿರುದ್ಧ ಗೋರಖ್ ಪುರದ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. ಆದಿತ್ಯನಾಥ್ ಅವರ ದ್ವೇಷದ ಭಾಷಣದ ನಂತರ, ಗೋರಖ್ ಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆದಿತ್ತು.










