ರೋಮ್ : ಇಟಲಿಯ 36 ವರ್ಷದ ವ್ಯಕ್ತಿಯೋರ್ವನಿಗೆ ಒಂದೇ ಬಾರಿಗೆ ಮಂಕಿಪಾಕ್ಸ್, ಕೊರೊನಾ, ಎಚ್ಐವಿ ಸೋಂಕು ತಗುಲಿದೆ. ಅಂದ ಹಾಗೆ, ಈ ವ್ಯಕ್ತಿ ಅನೇಕ ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದರಿಂದ ಸೋಂಕು ತಗುಲಿರುವುದು ದೃಢವಾಗಿದೆ.
ಈ ವ್ಯಕ್ತಿ ಜೂನ್ 16 ರಿಂದ ಜೂನ್ 20ರವರೆಗೆ ಐದು ದಿನಗಳ ಕಾಲ ಸ್ಪೇನ್ ನಲ್ಲಿ ತಂಗಿದ್ದನು. ಈ ವೇಳೆ ಅನೇಕ ಪುರುಷರೊಂದಿಗೆ ಅಸುರಕ್ಷಿತವಾದ ಲೈಂಗಿಕ ಸಂಬಂಧವನ್ನು ಹೊಂದಿದ್ದನು. ಮನೆಗೆ ಹಿಂತಿರುಗಿದ ನಂತರ ಈ ರೋಗಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಮೂರು ದಿನಗಳ ಬಳಿಕ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ಪಾಸಿಟಿವ್ ಇರುವುದು ತಿಳಿಯಿತು. ನಂತರದ ದಿನಗಳಲ್ಲಿ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಸ್ಪತ್ರೆಗೆ ದಾಖಲಾದಾಗ ಮಂಕಿ ಪಾಕ್ಸ್ ಸೋಂಕು ಇರುವುದು ಪತ್ತೆಯಾಗಿದೆ. ಈ ನಡುವೆ ಎಚ್ ಐವಿ ಪರೀಕ್ಷೆಯಲ್ಲೂ ಪಾಸಿಟಿವ್ ಎಂದು ವರದಿ ಬಂದಿದೆ. ಈತ ಫೈಜರ್ ಕಂಪನಿಯ ಕೊರೊನಾ ವೈರಸ್ ಸೋಂಕು ನಿರೋಧಕ ಲಸಿಕೆಯ ಎರಡು ಡೋಸ್ ಪಡೆದಿದ್ದ.
ಸದ್ಯ ಈ ವ್ಯಕ್ತಿಯು ಕೊರೊನಾ ಹಾಗೂ ಮಂಕಿ ಪಾಕ್ಸ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಆದರೆ, ಎಚ್ ಐವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.










