ಬಿಹಾರ ನಕಲಿ ಮದ್ಯ ದುರಂತ – ಮಾಸ್ಟರ್ ಮೈಂಡ್ ಅರೆಸ್ಟ್…

75
firstsuddi

ಪಾಟ್ನಾ: ಬಿಹಾರದ ಸರನ್ ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ನಕಲಿ ಮದ್ಯ ದುರಂತ ಪ್ರಕರಣದ ಮಾಸ್ಟರ್ ಮೈಂಡ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸರನ್ ಜಿಲ್ಲೆಯ ದೋಯಿಲಾ ಗ್ರಾಮದ ನಿವಾಸಿ ರಾಮ್ ಬಾಬು ಮಹ್ತೋ ಎಂದು ಗುರುತಿಸಲಾಗಿದೆ.

ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಸಿಂಗ್ ಯಾದವ್ ಅವರು ಮಾತನಾಡಿ, ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ರಾಮ್ ಬಾಬು ಮಹ್ತೋ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಈ ಸಂಬಂಧ ಬಿಹಾರ ರಾಜ್ಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗಿತ್ತು. ರಾಮ್ ಬಾಬು ಮಹ್ತೋ ಪ್ರಕರಣದ ಮೋಸ್ಟ್ ವಾಂಟೆಡ್ ವ್ಯಕ್ಯಿಯಾಗಿದ್ದ. ಆಗಾಗ ಆರೋಪಿ ಸ್ಥಳ ಬದಲಾಯಿಸುತ್ತಿದ್ದರಿಂದ ಬಿಹಾರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

ಬಳಿಕ ಪೊಲೀಸರ ತಂಡ ರಚಿಸಿ, ಹುಡುಕಾಟ ನಡೆಸಲು ಮುಂದಾಗಲಾಗಿತ್ತು. ಇದರಂತೆ ದ್ವಾರಕಾದಲ್ಲಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಯ ಬಂಧನದ ಬಗ್ಗೆ ಮುಂದಿನ ಕ್ರಮಕ್ಕಾಗಿ ಬಿಹಾರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಯಾದವ್ ಹೇಳಿದ್ದಾರೆ.