ಭೋಪಾಲ್: ವಧುವಿನ ಕುಟುಂಬದವರನ್ನು ಕರೆದೊಯ್ಯುತ್ತಿದ್ದ ಟ್ರಕ್ ನದಿಗೆ ಉರುಳಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಧ್ರಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತರೆಲ್ಲರೂ ಗ್ವಾಲಿಯರ್‌ನ ಬಿಲ್ಹೆಟಿ ಗ್ರಾಮದವರಾಗಿದ್ದು, ಇವರೆಲ್ಲರೂ ಟಿಕಮ್‌ಗರ್ ನಲ್ಲಿ ನಡೆಯುತ್ತಿದ್ದ ಮಗಳ ಮದುವೆಗೆ ತೆರಳುತ್ತಿದ್ದರು. ಘಟನೆಯಲ್ಲಿ ಸುಮಾರು 24 ಮಂದಿ ಗಾಯಗೊಂಡಿದ್ದು, ಹಲವು ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.
ಘಟನೆ ಸಂಬಂಧ ಮಧ್ಯಪ್ರದೇಶದ ಗೃಹಸಚಿವ ನರೋತ್ತಮ್ ಮಿಶ್ರಾ ಮಾತನಾಡಿ, ಬುಹಾರಾ ಗ್ರಾಮದಲ್ಲಿರುವ ನದಿಯ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ ಚಕ್ರಗಳು ಜಾರಿ ನದಿಗೆ ಉರುಳಿದೆ. ಪರಿಣಾಮ 2 ಹಾಗೂ ಮೂರು ವರ್ಷದ ಮಕ್ಕಳು ಸೇರಿ 65 ವರ್ಷದ ಮಹಿಳೆ ಮತ್ತು 18 ವರ್ಷದ ಹುಡುಗನೊಬ್ಬ ಮೃತಪಟ್ಟಿದ್ದಾನೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.










