ನನ್ನ ನೋಡಿ ಮತ ಕೊಡಬೇಡಿ. ಮೋದಿ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ, ಮೋದಿಗೆ ಮತ ಕೇಳುವವರು ವಾರಣಾಸಿಗೆ ಹೋಗಿ ಕೇಳಿ:ಪ್ರಮೋದ್ ಮಧ್ವರಾಜ್…

198
firstsuddi

ಮೂಡಿಗೆರೆ: ಜಾತ್ಯತೀತ ಜನತಾದಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ , ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಸಭೆ ಇಂದು ಬಣಕಲ್ ಸಮುದಾಯ ಭವನದಲ್ಲಿ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಟಿ.ಎಂ ಸುಬ್ರಮಣ್ಯರವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಭ್ಯರ್ಥಿಯಾದ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್- ಜೆಡಿಎಸ್ ಪಕ್ಷದ ಮೈತ್ರಿ ತೆಂಗಿನ ಎಣ್ಣೆ ಮತ್ತು ನೀರಿನ ಮಿಶ್ರಣದ ಸಂಬಂಧವಲ್ಲ,ಅದು ಹಾಲು ಜೇನಿನ ಸಂಪೂರ್ಣ ಮಿಶ್ರಣವಾಗಿದೆ. ದಾನ ಮಾಡುವ ಕೈ ನನ್ನದು, ಲಂಚಕ್ಕೆ ವೊಡ್ಡುವ ಕೈ ನನ್ನದಲ್ಲ. ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ನನಗೆ ಮತ ಕೊಡಿ ನಾನು ಕ್ಷೇತ್ರ ಅಭಿವೃದ್ದಿ ಮಾಡುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ಆಶ್ವಾಸನೆ ನೀಡಿ ಗೆದ್ದರು. ಆದರೆ ಈಗ ನನ್ನ ನೋಡಿ ಮತ ಕೊಡಬೇಡಿ. ಮೋದಿ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಮೋದಿಗೆ ಮತ ಕೇಳುವವರು ವಾರಣಾಸಿಗೆ ಹೋಗಿ ಕೇಳಿ ಎಂದರು. ನಾನು ರಾಹುಲ್ ಗಾಂಧಿಗೆ ಮತ ಕೊಡಿ ಎಂದು ಕೇಳುವುದಿಲ್ಲ. ನಾನು ನನಗೆ ಮತ ಕೊಡಿ ಎಂದು ಕೇಳುತ್ತೇನೆ. ಈ ಬಾರಿ ನನಗೆ ಎಲ್ಲರೂ ಆಶೀರ್ವದಿಸಿ ಜಯಶೀಲನಾಗಿ ಮಾಡಿ, ನಾನು ಸಂಪೂರ್ಣ ಕ್ಷೇತ್ರದ ಅಭಿವೃದ್ದಿ ಮಾಡಲು ಬದ್ಧ ಎಂದರು.
ಶೋಭಾ ಕರಂದ್ಲಾಜೆಯವರು ಗೆಲುವುದಿಲ್ಲ ಎಂದು ತಿಳಿದು ಬಿಜೆಪಿ ರಾಷ್ಟ್ರೀಯ ಸಮಿತಿ ಟಿಕೆಟ್ ನಿರಾಕರಣೆ ಮಾಡಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಒತ್ತಡದಿಂದ ಟಿಕೆಟ್ ಶೋಭಾ ಕರಂದ್ಲಾಜೆ ಅವರಿಗೆ ದೊರಕಿದ್ದು, ಸ್ವ ಪಕ್ಷದಿಂದಲೆ ಗೋ ಬ್ಯಾಕ್ ಶೋಭಕ್ಕ ಚಳುವಳಿ ನಡೆಯುತ್ತಿದ್ದು,   ಶೋಭಾ ಕರಂದ್ಲಾಜೆ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಎಲ್ ಮೂರ್ತಿ ಎಂದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಬಿ.ಬಿ ನಿಂಗಯ್ಯ ಅವರು ದೇಶಕ್ಕೆ ಈಗ ಗಂಡಾಂತರ ಬಂದಿದೆ. ಮೋದಿಯವರ ಭಾಷಣದಲ್ಲಿ ಅನ್ಯ ಪಕ್ಷಗಳನ್ನು ಮುಕ್ತ ಮಾಡುವ ಬಗ್ಗೆ ಮಾತನಾಡುತ್ತಾರೆ. ದೇಶದ ಅಭಿವೃದ್ದಿ ಬಗ್ಗೆ ಸ್ವಲ್ಪವೂ ಯೋಚನೆ ಮಾಡಲ್ಲ. ಶೋಭಾ ಅವರು ಸಂಸದರಾದ ಮೇಲೆ ಈ ಕ್ಷೇತ್ರದಲ್ಲಿ ಯಾವುದೇ ಜನಪರ ಕೆಲಸ ಮಾಡಿಲ್ಲ ಎಂಬುದು ಜನಸಾಮಾನ್ಯರಿಗೆ ತಿಳಿದಿರುವ ವಿಷಯ. ಈ ಬಾರಿ ನಮ್ಮ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಗೆಲ್ಲಿಸೋಣ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಯುಪಿಎ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಬಂದರೆ ರಾಹುಲ್ ಗಾಂಧಿಯವರು ಪ್ರತಿ ಬಿಪಿಎಲ್ ಕುಟುಂಬಕ್ಕೆ ಅರ್ಹತೆ ಮೇರೆಗೆ ತಿಂಗಳಿಗೆ 6 ಸಾವಿರ ರೂ ನಂತೆ ವರ್ಷಕ್ಕೆ 72 ಸಾವಿರ ನೇರವಾಗಿ ಬಡವರ ಖಾತೆಗೆ ಬರಲಿದೆ.ಕಾಂಗ್ರೆಸ್ ಸರಕಾರ ತನ್ನದೇ ಆದ ಇತಿಹಾಸ ಹೊಂದಿದ್ದು,ಮದ್ವರಾಜ್ ಕಾಂಗ್ರೆಸ್‍ನ ಕಟ್ಟಾಳು,ಅವರ ಕುಟುಂಬವೂ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ. ಮದ್ವರಾಜ್‍ಗೆ ರಾಜಕೀಯದ ಉತ್ತಮ ಅನುಭವವಿದೆ ಎಂದರು.
ಈ ಸಂದರ್ಭದಲ್ಲಿ  ರಾಜ್ಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿದರಹಳ್ಳಿ ಜಯರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಜಿ ಸುರೇಂದ್ರ, ಜೆಡಿಎಸ್ ಮುಖಂಡರಾದ ಹೆಚ್.ಹೆಚ್ ದೇವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಲ್ ಅಭಿಜಿತ್, ಹಾಗೂ ಬಣಕಲ್ ಹೋಬಳಿಯ ಜೆಡಿಎಸ್-ಕಾಂಗ್ರೆಸ್, ಮುಖಂಡರು ಭಾಗಿಯಾದರು.