ನಮಾಜ್​ಗಾಗಿ ಮಕ್ಕಳ ಪರೀಕ್ಷಾ ವೇಳಾಪಟ್ಟಿ ಬದಲಾವಣೆಯೇ ಎಂದು ಟೀಕಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲು…

44
firstsuddi

ಶಿವಮೊಗ್ಗ: ಎಸ್​​ಎಸ್​​ಎಲ್​ಸಿ ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ವಿಷಯದಲ್ಲಿ ಧಾರ್ಮಿಕ ಭಾವನೆ ಕೆರಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಸಂಬಂಧಿಸಿದಂತೆ ಮಕ್ಕಳು ಧಾರ್ಮಿಕವಾಗಿ ಪರಿಣಾಮ ಬೀಳುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಎನ್‌ಎಸ್‌ಯುಐ ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಸಿಆರ್‌ಪಿಸಿ ಕಲಂ 157 ಅಡಿ ಎಫ್ಐಆರ್ ದಾಖಲಾಗಿದೆ. 

ಸೂಲಿಬೆಲೆ ಹೇಳಿದ್ದೇನು?
ಎಸ್​​ಎಸ್​​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಸಮಯಾವಕಾಶ ನೀಡಲು ಬೆಳಗ್ಗಿನ ಪರೀಕ್ಷೆಗಳನ್ನು ಮಧ್ಯಾಹ್ನದ ನಂತರ ನಿಗದಿ ಮಾಡಲಾಗಿದೆ ಎಂಬ ಬಲಪಂಥೀಯರು ಟೀಕಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ (ಟ್ವಿಟರ್) ವೇಳಾಪಟ್ಟಿ ಹಂಚಿಕೊಂಡ ಚಕ್ರವರ್ತಿ ಸೂಲಿಬೆಲೆ, ಎಸ್​​ಎಸ್​​ಎಲ್​ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗಿನ ಅವಧಿಯಲ್ಲಿ ನಡೆಯಲಿದೆ. ಶುಕ್ರವಾರ ಮಾತ್ರ ಯಾಕೆ ಮಧ್ಯಾಹ್ನದ ನಂತರ ಎಂದು ಪ್ರಶ್ನಿಸಿದ್ದರು. ಅಲ್ಲದೆ, ನಮಾಜ್​ಗೆ ಸಮಯವೇ ಎಂದು ಪ್ರಶ್ನಿಸಿದ್ದರು.

ಎಸ್​​ಎಸ್​​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಸ್ಪಷ್ಟನೆ ನೀಡಿದ ಪರೀಕ್ಷಾ ಮಂಡಳಿ, ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಬೆಳಗ್ಗೆ ನಡೆಯುವ ಕಾರಣ ಎಸ್​​ಎಸ್​​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಮಾಡಲಾಗಿದೆ. ನಮಾಜ್​ಗೆ ಅನುಕೂಲ ಮಾಡಿಕೊಡಲು ಮಧ್ಯಾಹ್ನ ಪರೀಕ್ಷೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.