ಹೈದರಾಬಾದ್ : ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಎಲ್ಲ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ವಿದಾಯದ ಬಗ್ಗೆ ಟ್ವೀಟ್ ಮೂಲಕ ಡಿವಿಲಿಯರ್ಸ್ ಅವರು ದೃಢಪಡಿಸಿದ್ದಾರೆ. ಡಿವಿಲಿಯರ್ಸ್ ನಿವೃತ್ತಿ ಘೋಷಣೆ ಮಾಡಿದ್ದು, ಟೆಸ್ಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ದಾರೆ.
ನಿಮ್ಮ ನಿರ್ಧಾರ ನನಗೆ ತುಂಬಾ ನೋವುಂಟು ಮಾಡಿದೆ. ಅದರೆ ನೀವೂ ತೆಗೆದುಕೊಂಡಿರುವ ನಿರ್ಧಾರ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮವಾಗಿದೆ ಎಂದು ನನಗೆ ತಿಳಿದಿದೆ. ಐ ಲವ್ ಯೂ ಎಂದು ಬರೆದುಕೊಂಡಿರುವ ವಿರಾಟ್, ನಮ್ಮ ಕಾಲದ ಅತ್ಯುತ್ತಮ ಆಟಗಾರ ಹಾಗೂ ನಾನು ಭೇಟಿಯಾದ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ನೀವು. ಆರ್ ಸಿಬಿ ತಂಡಕ್ಕೆ ಯಾವ ರೀತಿಯಾಗಿ ಕೊಡುಗೆ ನೀಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಬಂಧ ಆಟಕ್ಕಿಂತಲೂ ಮೀರಿದ್ದು ಎಂದಿದ್ದಾರೆ.
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದ ಡಿವಿಲಿಯರ್ಸ್, 2011ರಿಂದಲೇ ಆರ್ ಸಿಬಿ ತಂಡದಲ್ಲಿ ಆಡಿದ್ದರು. ವಿರಾಟ್ ಕೊಹ್ಲಿ ಜೊತೆ ಅಮೋಘ ಜೊತೆಯಾಟಗಳಲ್ಲಿ ಭಾಗಿಯಾಗಿದ್ದ ಡಿವಿಲಿಯರ್ಸ್, ಆರ್ ಸಿಬಿ ಪರ 156 ಪಂದ್ಯಗಳಲ್ಲಿ 4,491 ರನ್ ಬಾರಿಸಿದ್ದಾರೆ. 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 133 ಮತ್ತು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅವರು ಗಳಿಸಿದ್ದ ಅಜೇಯ 129 ರನ್ಗಳು ಆರ್ ಸಿಬಿ ಇತಿಹಾಸದಲ್ಲಿ ಎರಡನೇ ಮತ್ತು ಮೂರನೇ ಅತಿ ಹೆಚ್ಚು ವೈಯಕ್ತಿಕ ರನ್ ಮೊತ್ತವಾಗಿದೆ.










