ನಷ್ಟದ ವರದಿ ಬಂದ ನಂತರ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದ ಬಗ್ಗೆ ತೀರ್ಮಾನ : ಸಿಎಂ.

53
firstsuddi

ಮೈಸೂರು : ರಾಜ್ಯದಲ್ಲಿ ಮಳೆ ಹಾನಿ ಬಗ್ಗೆ ಮೊದಲ ಹಂತದ ನಷ್ಟದ ಬಗ್ಗೆ ಇಂದು ಸಂಜೆಯ ಒಳಗಡೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತೇವೆ. ನಂತರ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಅಂದಾಜು ಮಾಡಿದ ನಂತರ ಕೇಂದ್ರದಿಂದ ಪರಿಹಾರ ಕೇಳುವ ಬಗ್ಗೆ ತೀರ್ಮಾನಿಸಲಾಗುವುದು. ಸದ್ಯಕ್ಕೆ 750 ಕೋಟಿ ರೂ. ಎನ್ ಡಿಆರ್ ಎಫ್ ಹಣ ನಮ್ಮಲ್ಲಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದರು.

ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂ ಕುಸಿತವಾಗಿದ್ದು, ಕೊಡಗಿನಲ್ಲಿ ಭೂಕಂಪ, ಕಡಲುಕೊರೆತವಾಗಿದ್ದು, ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಜಲಾಶಯಗಳಿಂದ ನೀರು ಹೊರಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಪ್ರಥಮ ಹಂತದ ಸಮೀಕ್ಷೆಯಾಗಿದೆ. ಈ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ ಎಂಬ ಆರೋಪ ಸರಿಯಲ್ಲ. ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ. ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನೆರೆ ಹಾನಿ ಪೀಡಿತ ಪ್ರದೇಶದಲ್ಲಿ ನಾನು ಸೇರಿದಂತೆ ಎಲ್ಲ ಸಚಿವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.