ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಹೊಳೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಪತ್ತೆಯಾಗಿದೆ. ಕಾರು ಬಿದ್ದ 250 ಮೀ.ದೂರದಲ್ಲಿ ಶವ ಪತ್ತೆಯಾಗಿದೆ.
ಜು.10ರ ತಡರಾತ್ರಿ ಕಾರೊಂದು ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಹೊಳೆಗೆ ಉರುಳಿತ್ತು. ಘಟನೆಯಂದು ಕಾರನ್ನು ಸ್ಥಳೀಯರು ಹಾಗೂ ಮುಳುಗುತಜ್ಞರ ಸಹಾಯದಿಂದ ಮೇಲಕ್ಕೆತ್ತಲಾಗಿತ್ತು. ಆದರೆ ನಾಪತ್ತೆಯಾಗಿದ್ದ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಧನುಷ್ (25) ಮತ್ತು ಮಂಜೇಶ್ವರ ನಿವಾಸಿ ಧನುಷ್ (21) ಪತ್ತೆಯಾಗಿರಲಿಲ್ಲ. ಅಗ್ನಿಶಾಮಕದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸರು ಸತತ ಹುಡುಕಾಟ ನಡೆಸಿದ ನಂತರ ಇಂದು ಬೆಳಗ್ಗೆ ಇಬ್ಬರ ಶವ ಪತ್ತೆಯಾಗಿದೆ.










