ನವದೆಹಲಿ: ನಾನು ನನ್ನ ಜೀವಮಾನದ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನಕ್ಕೆ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಇದರ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಅವರೊಂದಿಗಿನ ಕೆಲವು ಘಟನಾವಳಿಗಳ ಸಹಿತ ಸಂತಾಪ ಸೂಚಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಭಾರತವನ್ನು ಅಪಾರ ಬುದ್ಧಿವಂತಿಕೆ ಮತ್ತು ಸಮಾನತೆಯಿಂದ ಮುನ್ನಡೆಸಿದವರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ತಿಳಿವಳಿಕೆಯು ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಏರುವಂತೆ ಮಾಡಿತು. ನಾನು ಓರ್ವ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ. ಅವರನ್ನು ದೇಶದ ಕೋಟ್ಯಂತರ ಜನರು ನೆನಪಿಸಿಕೊಳ್ಳುತ್ತಾರೆ. ಅವರ ಮಾರ್ಗದರ್ಶನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಮನಮೋಹನ್ ಸಿಂಗ್ ಅವರ ಪತ್ನಿ ಹಾಗೂ ಕುಟಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದೂರ ದೃಷ್ಠಿಯುಳ್ಳ ರಾಜನೀತಿ ತಜ್ಞನನ್ನು ಕಳೆದುಕೊಂಡಿದ್ದೇವೆ. ಅದೇ ರೀತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ‘ಮಾಜಿ ಪ್ರಧಾನಿ ನಿಧನದಿಂದ ದೂರ ದೃಷ್ಠಿಯುಳ್ಳ ರಾಜನೀತಿ ತಜ್ಞನನ್ನು ಕಳೆದುಕೊಂಡಿದ್ದೇವೆ. ದೇಶದ ಆರ್ಥಿಕತೆಗೆ ಅವರು ನೀಡಿದ ಕೊಡುಗೆ ಎಂದಿಗೂ ಮರೆಯಲಾಗದು. ಅವರೊಂದಿಗೆ ಕೆಲಸ ಮಾಡಿರುವುದು ನನಗೆ ಹೆಮ್ಮೆ ತಂದಿದೆ. ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿರುವ ಕೊಡುಗೆ ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ಅವರ ನೀತಿಗಳು ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದಿವೆ’ ಎಂದು ಬರೆದುಕೊಂಡಿದ್ದಾರೆ. ಭಾರತಕ್ಕಾಗಿ ನೀಡಿದ ಅವರ ಕೊಡುಗೆ ಯಾವಾಗಲೂ ಶಾಶ್ವತವಾಗಿದೆ. ಸಿಂಗ್ ಅವರ ಕುಟುಂಬ, ಅಭಿಮಾನಿಗಳು, ಹಾಗೂ ಸ್ನೇಹಿತರುಗಳಿಗೆ ನನ್ನ ಸಂತಾಪಗಳು ಎಂದು ಸಹ ಹೇಳಿಕೊಂಡಿದ್ದಾರೆ. ಹಾಗೇ ಹಲವು ನಾಯಕರುಗಳು ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.










