ಹುಬ್ಬಳ್ಳಿ: ‘ನಾನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಜಗದೀಶ್ ಶೆಟ್ಟರ್ ನನಗೆ ಟಿಕೆಟ್ ತಪ್ಪಿಸಲು ತಂತ್ರ ಮಾಡಿದ್ದಾರೆ ಎಂಬುವಂತದ್ದನ್ನು ನಾನು ನಂಬುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಟಿಕೆಟ್ ಘೋಷಣೆ ಬೆನ್ನಲ್ಲೇ ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ‘ಮೋದಿ ಅವರು ದೇಶದ ಅತ್ಯಂತ ಜನಪ್ರಿಯ ನಾಯಕರು. ಈಗ 72 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ 20 ಅಭ್ಯರ್ಥಿಗಳ ಘೋಷಣೆ ಮಾಡಿದೆ. ಅದರಲ್ಲಿ ಧಾರವಾಡಕ್ಕೆ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಅಲ್ಲದೆ ‘ದೇಶದಲ್ಲಿ ಎನ್‍ಡಿಎ 400 ಸ್ಥಾನ ಗೆಲ್ಲಲಿದೆ. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ. ಮೂರನೇ ಬಾರಿಗೆ ನಾವು ದಾಖಲೆಯ ವಿಜಯ ಸಾಧಿಸುತ್ತೇವೆ. ಆದಷ್ಟು ಬೇಗ ಮುಂದಿನ ಅಭ್ಯರ್ಥಿಗಳ ಹೆಸರು ಘೋಷಣೆ ಆಗಲಿದೆ’ ಎಂದು ಜೋಶಿ ಹೇಳಿದರು.










