ನಾಳೆಯಿಂದ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಶುರು…

46
firstsuddi

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಲಿದೆ.

ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಲಿದೆ.

ಇಂದಿನಿಂದ ಡಿಸೆಂಬರ್ 8 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಗೋಚರಿಸಿದ್ದು, ಡಿಸೆಂಬರ್ 8, 9 ಮತ್ತು 10 ರಂದು ಗುಡುಗು ಸಹಿತ ವ್ಯಾಪಕ ಮಳೆ ಬರುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ವಾತಾವರಣ ಸಹಜ ಸ್ಥಿತಿಯಲ್ಲಿದ್ದು, ಡಿಸೆಂಬರ್ 8 ರವರೆಗೆ ಚಳಿ, ಸಾಧಾರಣ ಮಳೆಯಾಗಲಿದೆ. ಬೆಳಗಿನ ಜಾವ ದಟ್ಟ ಮಂಜು ಇರಲಿದೆ.

ಡಿಸೆಂಬರ್ 7 ರಿಂದ 10 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಸುರಿಯುವ ಸಾಧ್ಯತೆ ಕಂಡುಬಂದಿದೆ. ಹಿಂಗಾರು ಮಳೆ ಮತ್ತೆ ಚುರುಕು ಪಡೆಯಲಿದ್ದು, ಡಿಸೆಂಬರ್ 8 ರಿಂದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಅಬ್ಬರ ಶುರುವಾಗಲಿದೆ.

ಚಿಕ್ಕಬಳ್ಳಾಪುರ, ಕೋಲಾರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದ್ದು, ಗುಡುಗು ಸಹಿತ ಸುಮಾರು 11 ಸೆಂಟಿಮೀಟರ್ ನಷ್ಟು ಮಳೆ ದಾಖಲಾಗಬಹುದು ಎಂದು ಎಚ್ಚರಿಕೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಜೋರು ಮಳೆ ಆಗಲಿದೆ.