ನಾಳೆಯಿಂದ ರಾಜ್ಯಾದ್ಯಂತ ಹತ್ತು ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೊರೊನಾ ಲಸಿಕೆ: ನಾರಾಯಣಗೌಡ.

162
firstsuddi

ಬೆಂಗಳೂರು : ಕ್ರೀಡಾಪಟುಗಳಿಗೆ ಉಚಿತವಾಗಿ ಕೋವಿಡ್ ಮೊದಲ ಹಂತದ ಲಸಿಕೆಯನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ನೀಡಲು ತೀರ್ಮಾನಿಸಲಾಗಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಬೆಳಗ್ಗೆ 10.30 ಗಂಟೆಗೆ ಈ ಲಸಿಕಾ ಅಭಿಯಾನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಲಿದ್ದಾರೆ.

ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಆದ್ಯತಾ ಗುಂಪಿಗೆ ಸೇರಿಸಿದ್ದು, ನೋಂದಣಿ ಮಾಡಿಕೊಂಡ ಕ್ರೀಡಾಪಟುಗಳಿಗೆ ಲಸಿಕೆ ನೀಡಲಿದೆ. ಈಗಾಗಲೇ 2200 ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, 10 ಮತ್ತು 11 ರಂದು ಇವರಿಗೆ ಲಸಿಕೆ ನೀಡಲಾಗುವುದು. ಇದುವರೆಗೂ ಹೆಸರನ್ನು ನೋಂದಾಯಿಸಿಕೊಳ್ಳದ ಕ್ರೀಡಾಪಟುಗಳು, ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬಹುದು.

ಗುರುವಾರ (ನಾಳೆ) ದಂದು ಬಾಸ್ಕೆಟ್ ಬಾಲ್, ಫೆನ್ಸಿಂಗ್, ಈಜು, ಹಾಕಿ, ಟೆನ್ನಿಕಾಯ್ಸ್, ಬ್ಯಾಡ್ಮಿಂಟನ್, ರೋಯಿಂಗ್ ಮತ್ತು ನೆಟ್ ಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಹಾಗೂ ಶುಕ್ರವಾರದಂದು ವುಶು, ಶೂಟಿಂಗ್, ಹ್ಯಾಂಡ್ಬಾಲ್, ಫುಟ್ಬಾಲ್ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ವಾಲಿಬಾಲ್ ಮತ್ತು ರೋಲರ್ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ಈಗಾಗಲೇ ನೋಂದಣಿ ಮಾಡಿಸಿಕೊಂಡವರನ್ನು ಹೊರತುಪಡಿಸಿ ಉಳಿದ ಕ್ರೀಡಾಪಟುಗಳಿಗೆ ಲಸಿಕಾ ಅಭಿಯಾನವನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.