ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿ : ಸಿಎಂ.

78
firstsuddi

ಬೆಳಗಾವಿ : ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿಯಿಂದ ಕಿತ್ತೂರಿನವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಐದು ರಾಷ್ಟ್ರೀಯ ಹೆದ್ದಾರಿಗಳ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಕಾರ್ಮಿಕ ಸ್ಥಳಗಳಾದ ಪಂಢರಾಪುರ, ಶಿರಡಿ ಮತ್ತಿತರ ಧಾರ್ಮಿಕ ಸ್ಥಳಗಳನ್ನು ಕರ್ನಾಟಕ ರಾಜ್ಯದ ಧಾರ್ಮಿಕ ಸ್ಥಳಗಳ ಜತೆ ಜೋಡಿಸಲು ವಿನೂತನ ಯೋಜನೆಯನ್ನು ನಿತಿನ್ ಗಡ್ಕರಿ ಅವರು ರೂಪಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೆರವಿನಿಂದ ರಾಜ್ಯಕ್ಕೆ ಹಲವಾರು ಯೋಜನೆಗಳು ಲಭಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಗಡ್ಕರಿಯವರು ರಿಂಗ್ ರೋಡ್ ಮಾಡಲು ಒತ್ತು ನೀಡಿದ್ದಾರೆ. ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡಬೇಕೆಂದು ಬಹಳ ವರ್ಷಗಳ ಯೋಜನೆಯಿದೆ. ಆದಷ್ಟು ಬೇಗ ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡುತ್ತೇನೆ. ರಾಜ್ಯದಲ್ಲಿರುವ ಹೆದ್ದಾರಿಗಳು ಮತ್ತು ರಿಂಗ್ ರಸ್ತೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಜಿಎಸ್ಟಿ ವಿನಾಯಿತಿ, ಭೂಸ್ವಾಧೀನ ಮತ್ತಿತರ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.