ಬೆಂಗಳೂರು : ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ. ಫೆಬ್ರವರಿ 18 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅನಿಶಾ(33) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಮೂರು ವರ್ಷಗಳ ಹಿಂದೆ ಅನಿಶಾ ಜೊತೆ ನಿಜಾಮುದ್ದೀನ್ ಎರಡನೇ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ನಿಜಾಮುದ್ದೀನ್ ಆಗಾಗ ಹೆಂಡ್ತಿಗೆ ನೀನು ನೋಡಲು ಸುಂದರವಾಗಿಲ್ಲ, ಕುರೂಪಿಯಾಗಿದ್ದೀಯಾ, ಬೇಗನೆ ಸತ್ತರೆ ಮತ್ತೊಂದು ಮದುವೆಯಾಗುತ್ತೇನೆ ಎಂದು ಕಿರುಕುಳ ನೀಡುತ್ತಿದ್ದ. ಇದಕ್ಕೆ ತಾಯಿ ಖಲೀಂ ಉನ್ನಿಸಾ ಸಾಥ್ ನೀಡಿದ್ದಳು ಎಂಬ ಆರೋಪ ಕೇಳಿಬಂದಿದೆ.
ಇದೇ ತಿಂಗಳು 17ರಂದು ಗಂಡನ ಮನೆಯವರು ಇನ್ನೂ ಸತ್ತಿಲ್ವಾ ಎಂದು ಹೀಯಾಳಿಸಿದ್ದರಂತೆ. ಇದರಿಂದ ಮನನೊಂದು ಅನಿಶಾ ಮರು ದಿನ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತಕ್ಷಣವೇ ಮನೆಯವರು ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅನಿಶಾ ಮೃತಪಟ್ಟಿದ್ದಾರೆ. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










