ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ : ಸಚಿವ ಆರ್.ಅಶೋಕ್ ಹೇಳಿದ್ದೇನು?

16
firstsuddi

ಬೆಂಗಳೂರು : ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡರು. ಬಸವಣ್ಣ, ಸಿದ್ದಗಂಗಾ ಶ್ರೀ, ಸಂವಿಧಾನಶಿಲ್ಪಿ ಅಂಬೇಡ್ಕರ್, ಆದಿಚುಂಚನಗಿರಿ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಲೋಪಗಳನ್ನು ಸರಿಪಡಿಸಿ ಅದನ್ನು ಪಠ್ಯಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಹಿಂದೂ ದೇವರು ಇರಬಾರದು, ಸ್ವಾತಂತ್ರ್ಯ ಹೋರಾಟಗಾರರು ಇರಬಾರದು ಎಂಬುದು ಕಾಂಗ್ರೆಸ್ ಚಿಂತನೆ. ಅವರ ಕಾಲದಲ್ಲಿ ಪಠ್ಯದಲ್ಲಿ 150 ತಪ್ಪುಗಳು ಆಗಿದ್ದವು. ಆದರೀಗ 7-8 ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ಹಳೇ ಪಠ್ಯವನ್ನೇ ಮುಂದುವರಿಸಿ ಎಂದು ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿದ್ದಾಗ ಪಠ್ಯ ಪುಸ್ತಕ ಸಮಿತಿ ರಚನೆ ಆಗಿತ್ತು. ನಂತರ ಮುಂದೆ ಎರಡು ವರ್ಷದಲ್ಲಿ ಬರಗೂರು ಸಮಿತಿ ಕೆಲವು ಬದಲಾವಣೆ ಮಾಡಿತು. ಯಾಕೆಂದರೆ ಬಹಳ ಕಡೆ ಹಿಂದೂ ಮಹಾಸಾಗರದ ಹಿಂದೂ ಎಂಬ ಹೆಸರಿತ್ತು, ರಾಮ, ಈಶ್ವರ, ಶಿವಾಜಿ ಹೆಸರಿತ್ತು. ಇದು ಯಾವುದೂ ಅವರಿಗೆ ಇಷ್ಟವಾಗದ ಹೆಸರುಗಳು. ಅದಕ್ಕೆ ಸಮಿತಿ ಮಾಡಿ ಆ ಹೆಸರುಗಳನ್ನು ತೆಗೆದಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ತಪ್ಪುಗಳಾಗಿವೆ ಎಂದು ಆರೋಪಿಸಿ ಅದಕ್ಕೆ ಪುಸ್ತಕ ರೂಪದಲ್ಲಿ ದಾಖಲೆ ಕೊಟ್ಟರು.

ಸಿದ್ದರಾಮಯ್ಯ ಕಾಲದಲ್ಲಿ ಕುವೆಂಪು ಅವರ 8 ಗದ್ಯ ಪದ್ಯ ಪೈಕಿ ಒಂದನ್ನು ತೆಗೆದು ಹಂಸಲೇಖ ಅವರ ಬಣ್ಣದ ಬುಗುರಿ ಪದ್ಯ ಸೇರಿಸಲಾಯ್ತು. ಈಗ ಕಾಂಗ್ರೆಸ್ ನವರು ಕುವೆಂಪು ಬಗ್ಗೆ ನಮ್ಮ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳುತ್ತಿದ್ದಾರೆ. ಈಗ ನಮ್ಮ ಸರ್ಕಾರ ಕುವೆಂಪು ಅವರ 10 ಗದ್ಯ ಪದ್ಯ ಮಾಡಿದೆ. ಸಿದ್ದರಾಮಯ್ಯ ಸರ್ಕಾರದ ಬದಲಾವಣೆ ಮಾಡಿದಾಗ ಈ ಸಾಹಿತಿಗಳು ಯಾಕೆ ಧ್ವನಿ ಎತ್ತಲಿಲ್ಲ? ಈಗ ಯಾಕೆ ಮಾತಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರು ಪರಿಚಯಿಸುವ ಪಾಠದಲ್ಲಿ ಕೆಂಪೇಗೌಡರ ಉಲ್ಲೇಖ ಇರಲಿಲ್ಲ. ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು ಗೀತೆ ತೆಗೆಯಲಾಗಿದೆ. ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ ತೆಗೆಯಲಾಗಿದೆ. ಮೈಸೂರು ಮನೆತನದ ಅಧಿದೇವತೆ ಎಂಬ ಅಂಶ ತೆಗೆಯಲಾಗಿದೆ. ಸಿದ್ದರಾಮಯ್ಯಗೆ ಟಿಪ್ಪು ಅಂದರೆ ಮೈ ಮೇಲೆ ಬಂದು ಬಿಡುತ್ತದೆ ಎಂದರು.
ಮಥುರ ಶ್ರೀ ಕೃಷ್ಣ ಮಂದಿರ ಮತ್ತು ಸೋಮನಾಥ ದೇವಾಲಯದ ಅಂಶಗಳನ್ನು ಕೈಬಿಡಲಾಗಿದೆ. ಭಾರತದ ಮಹಾರಾಜರ ಕೊಡುಗೆಗಳ ಕಡೆಗಣನೆ ಮಾಡಲಾಗಿದೆ. ದಿಲ್ಲಿ ಸುಲ್ತಾನರ ಕಾಲದ ಖಿಲ್ಜಿ ಕಾಲದ ಗುಲಾಮಗಿರಿ ಅಂಶ ಕೈ ಬಿಡಲಾಗಿತ್ತು ಎಂದರು.

ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿ ಹಾಕಲಾಗಿದೆ. ಮಹಾತ್ಮ ಗಾಂಧಿಯವರ ಭಾರತ ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕೋಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಲಾಗಿದೆ. ಶಿವಾಜಿ ಮಹಾರಾಜರ ಉಲ್ಲೇಖವನ್ನು ಕೈ ಬಿಡಲಾಗಿದ್ದರೆ, ಚಂಗೀಸ್ ಖಾನ್ ಮತ್ತು ತೈಮೂರ್ ದಾಳಿಗಳ ಅಂಶಗಳನ್ನು ತೆಗೆಯಲಾಗಿದೆ. ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಟಿಪ್ಪುವಿನ ಅತಿಯಾದ ವೈಭವೀಕರಣ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.