ಹೈದರಾಬಾದ್: ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಮಂಗುರ್ಲಾ ಗ್ರಾಮದಲ್ಲಿ ನಡೆದಿದೆ.
ವಿದ್ಯಾರ್ಥಿಯೊಬ್ಬ ಪರೀಕ್ಷಾ ಹಾಲ್ಗೆ ತಡವಾಗಿ ಬಂದಿದ್ದ ಹೀಗಾಗಿ ಪರೀಕ್ಷೆ ಬರೆಯಲು ಅವಕಾಶವನ್ನು ನೀಡಿರಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ನೀರಾವರಿ ಕಾಲುವೆಗೆ ಹಾರಿದ್ದಾನೆ.
ಪರೀಕ್ಷೆಯು ಬೆಳಗ್ಗೆ 9 ರಿಂದ ಆರಂಭವಾಗಿ ಮಧ್ಯಾಹ್ನ 12 ರವರೆಗೆ ನಡೆಯುತ್ತದೆ. ಆದರೆ 17 ವರ್ಷದ ವಿದ್ಯಾರ್ಥಿ ಬೆಳಗ್ಗೆ 9.15 ಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ ಎಂದು ವರದಿಯಾಗಿದೆ. ಹೀಗಾಗಿ ಆತನಿಗೆ ಶಿಕ್ಷಕರು ಪರೀಕ್ಷೆ ಬರೆಯಲು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಕಾಲುವೆಗೆ ಹಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಡೆತ್‌ನೋಟ್‌ನಲ್ಲೇನಿತ್ತು..?: ಪರೀಕ್ಷಾ ಕೇಂದ್ರ ತಡವಾಗಿ ತಲುಪಿದ್ದೇನೆ. ಹೀಗಾಗಿ ನನಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ವಿದ್ಯಾರ್ಥಿ ತನ್ನ ತಂದೆಗೆ ಪತ್ರ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಒಂದು ನಿಮಿಷ ತಡವಾದರೂ ಪರೀಕ್ಷೆಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಇಂಟರ್ ಮೀಡಿಯೇಟ್ ಬೋರ್ಡ್ ಜಾರಿಗೊಳಿಸುತ್ತದೆ. ವಿದ್ಯಾರ್ಥಿ ತಡವಾಗಿ ಬಂದಿದ್ದರಿಂದ ಪರೀಕ್ಷೆಗೆ ಹಾಜರಾಗಲು ಆತನಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಬೆಳಗ್ಗೆ 9.30 ರ ಸುಮಾರಿಗೆ ವಿದ್ಯಾರ್ಥಿ ತನ್ನ ಗ್ರಾಮಕ್ಕೆ ಹೋಗಿದ್ದ ಆದರೆ ಮನೆಗೆ ಹಿಂದಿರುಗದೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ವಿದ್ಯಾರ್ಥಿ ವಾಚ್ ಮತ್ತು ವಾಲೆಟ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.










