ಶ್ರೀನಗರ : ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಲೇ ಇದ್ದು, ಪಾಕ್ ಸೈನಿಕರ ಗುಂಡಿನ ದಾಳಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರಾದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ಉದ್ದಕ್ಕೂ ನಿನ್ನೆ ರಾತ್ರಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಭಾರತೀಯ ಸೇನೆಯ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಅವರು ಹುತಾತ್ಮರಾಗಿದ್ದಾರೆ. ಪಾಕ್ ಸೇನೆ ಜಮ್ಮು ಕಾಶ್ಮೀರಾದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆ ಹಾಗೂ ರಜೌರಿ ಮತ್ತು ಪೂಂಚ್ ಜಿಲ್ಲೆಗಳ ನಿಯಂತ್ರಣ ರೇಖೆ ಬಳಿ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕದನ ವಿರಾಮ ಉಲ್ಲಂಘಿಸಿ ದಾಳೀ ನಡೆಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಯೋಧರು ಕೂಡಾ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










